ಅಲಹಾಬಾದ್: ವಕೀಲರ ಸಮವಸ್ತ್ರ ಧರಿಸದೇ, ಶರ್ಟ್ ಗುಂಡಿಗಳನ್ನು ತೆಗೆದು ನ್ಯಾಯಾಲಯಕ್ಕೆ ಆಗಮಿಸಿದ್ದ ವಕೀಲನಿಗೆ ಅಲಹಾಬಾದ್ ಹೈಕೋರ್ಟ್ 6 ತಿಂಗಳ ಜೈಲು ಶಿಕ್ಷೆ ವಿಧಿಸಿದೆ.
ವಕೀಲ ಅಶೋಕ್ ಪಾಂಡೆ ಜೈಲು ಶಿಕ್ಷೆಗೆ ಗುರಿಯಾದವರು. ವಿವೇಕ್ ಚೌಧರಿ ಹಾಗೂ ಬಿ.ಆರ್.ಸಿಂಗ್ ಅವರ ವಿಭಾಗೀಯ ಪೀಠ ಅಶೋಕ್ ಪಾಂಡೆ ವರ್ತನೆಗೆ 6 ತಿಂಗಳ ಸೆರೆವಾಸ ಹಾಗೂ 2000 ರೂಪಾಯಿ ದಂಡ ವಿಧಿಸಿ ಆದೇಶ ಹೊರಡಿಸಿದೆ.
ಒಂದುವೇಳೆ ದಂಡ ಪಾವತಿಸಲು ತಪ್ಪಿದರೆ ಒಂದು ತಿಂಗಳು ಹೆಚ್ಚಿನ ಸೆರೆವಾಸ ವಿಧಿಸಲಾಗುವುದು ಎಂದು ನ್ಯಾಯಪೀಠ ತಿಳಿಸಿದೆ. ವಕೀಲ ಅಶೋಕ್ ಪಾಂಡೆಗೆ ಲಕ್ನೌದ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಮುಂದೆ ಶರಣಾಗಲು ನಾಲ್ಕು ವಾರಗಳ ಕಾಲಾವಕಾಶ ನೀಡಲಾಗಿದೆ. ಅಲ್ಲದೇ ಅಲಹಾಬಾದ್ ಹೈಕೋರ್ಟ್ ಹಾಗೂ ಲಕ್ನೌ ಪೀಠದಲ್ಲಿ ವಕೀಲಿ ವೃತ್ತಿ ಮಾಡುವುದನ್ನು ಯಾಕೆ ನಿರ್ಬಂಧಿಸಬಾರದು ಎಂದು ಪ್ರಶ್ನಿಸಿ ನೋಟಿಸ್ ಜಾರಿ ಮಾಡಿದ್ದು, ಮೇ 1 ರೊಳಗೆ ಉತ್ತರಿಸಲು ಸೂಚಿಸಿದೆ.
2021ರ ಆಗಸ್ಟ್ 18ರಂದು ಅಶೋಕ್ ಪಾಂಡೆ ನ್ಯಾಯಾಲಯಕ್ಕೆ ವಕೀಲರ ಉಡುಪಿನಲ್ಲಿ ಬಾರದೇ ಗೂಂಡಾಗಳಂತೆ ಶರ್ಟ್ ಗುಂಡಿ ತೆಗೆದುಕೊಂಡು ಬಂದಿದ್ದರು. ಪ್ರಕರಣದ ವಿಚಾರಣೆ ವೇಳೆ ನ್ಯಾಯಮೂರ್ತಿಗಳನ್ನು ಗೂಂಡಾಗಳೆಂದು ಕರೆದಿದ್ದರು. ವಕೀಲನಿಂದ ನ್ಯಾಯಾಂಗ ನಿಂದನೆ ಹಿನ್ನೆಲೆಯಲ್ಲಿ ಜೈಲಿಶಿಕ್ಷೆ ಪ್ರಕಟಿಸಲಾಗಿದೆ.