ವಾಸನೆ ಕಾರಣಕ್ಕೆ ವಾಯುಯಾನದಲ್ಲಿ ವೈಮನಸ್ಸು: ಏರ್ ಹೋಸ್ಟೆಸ್‌ಗೆ ಕಚ್ಚಿದ ಮಹಿಳೆ | Watch

ಶೆನ್ಜೆನ್: ವಿಮಾನ ಪ್ರಯಾಣದಲ್ಲಿ ಕೆಲವೊಮ್ಮೆ ಅನಿರೀಕ್ಷಿತ ಘಟನೆಗಳು ನಡೆಯುವುದುಂಟು. ಅಂತಹುದೇ ಒಂದು ಘಟನೆ ಶೆನ್ಜೆನ್‌ನಿಂದ ಶಾಂಘೈಗೆ ಹೊರಟಿದ್ದ ವಿಮಾನದಲ್ಲಿ ನಡೆದಿದೆ. ಇಬ್ಬರು ಮಹಿಳಾ ಪ್ರಯಾಣಿಕರು ತಮ್ಮ ದೇಹದ ವಾಸನೆ ಮತ್ತು ಸುಗಂಧ ದ್ರವ್ಯದ ತೀವ್ರ ವಾಸನೆಯ ಬಗ್ಗೆ ಪರಸ್ಪರ ಜಗಳವಾಡಿದ್ದು, ಇದು ವಿಕೋಪಕ್ಕೆ ತಿರುಗಿ ವಿಮಾನವು ಸುಮಾರು ಎರಡು ಗಂಟೆಗಳ ಕಾಲ ತಡವಾಗುವಂತೆ ಮಾಡಿದೆ.

ಪಕ್ಕದ ಸೀಟಿನಲ್ಲಿ ಕುಳಿತಿದ್ದ ಈ ಇಬ್ಬರು ಮಹಿಳೆಯರ ವಾಗ್ವಾದ ತಾರಕಕ್ಕೇರಿದಾಗ, ವಿಮಾನದ ಸಿಬ್ಬಂದಿ ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಲು ಪ್ರಯತ್ನಿಸಿದ್ದಾರೆ. ಆದರೆ, ಕೋಪಗೊಂಡ ಮಹಿಳೆಯರಲ್ಲಿ ಒಬ್ಬರು ಏರ್ ಹೋಸ್ಟೆಸ್‌ಗಳ ಮೇಲೆ ಹಲ್ಲೆ ಮಾಡಿದ್ದಾರೆ. ಇಬ್ಬರು ಏರ್ ಹೋಸ್ಟೆಸ್‌ಗಳು ಅವರನ್ನು ಸಮಾಧಾನಪಡಿಸಲು ಮುಂದಾದಾಗ, ಒಬ್ಬ ಮಹಿಳೆ ಸಿಬ್ಬಂದಿಯೊಬ್ಬರಿಗೆ ಕಚ್ಚಿ ಗಾಯಗೊಳಿಸಿದರೆ, ಮತ್ತೊಬ್ಬ ಪ್ರಯಾಣಿಕೆಗೆ ಗೀಚಿದಳು ಎಂದು ವರದಿಯಾಗಿದೆ.

ಏಪ್ರಿಲ್ 1, 2025 ರಂದು ಶೆನ್ಜೆನ್ ಏರ್‌ಲೈನ್ಸ್ ವಿಮಾನವು ಟೇಕಾಫ್ ಆಗುವ ಮುನ್ನವೇ ಈ ಗಲಾಟೆ ಶುರುವಾಗಿತ್ತು. ಒಬ್ಬ ಮಹಿಳೆ ತನ್ನ ಪಕ್ಕದ ಪ್ರಯಾಣಿಕರ ದೇಹದ ದುರ್ವಾಸನೆಯ ಬಗ್ಗೆ ದೂರು ನೀಡಿದರೆ, ಇನ್ನೊಬ್ಬರು ಆಕೆಯ ತೀವ್ರವಾದ ಪರ್ಫ್ಯೂಮ್ ವಾಸನೆಯನ್ನು ಆಕ್ಷೇಪಿಸಿದರು. ಹೀಗೆ ಇಬ್ಬರೂ ಪರಸ್ಪರರ ವಾಸನೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ವಿಮಾನದೊಳಗಿನ ದೃಶ್ಯಗಳಲ್ಲಿ ಇಬ್ಬರು ಸಮವಸ್ತ್ರಧಾರಿ ಏರ್ ಹೋಸ್ಟೆಸ್‌ಗಳು ಪರಿಸ್ಥಿತಿಯನ್ನು ನಿಯಂತ್ರಿಸಲು ಮತ್ತು ಮಹಿಳೆಯರನ್ನು ಶಾಂತಗೊಳಿಸಲು ಪ್ರಯತ್ನಿಸುತ್ತಿರುವುದು ಕಂಡುಬಂದಿದೆ. ಆದರೆ, ದುರದೃಷ್ಟವಶಾತ್ ಒಬ್ಬ ಮಹಿಳೆ ಕ್ಯಾಬಿನ್ ಸಿಬ್ಬಂದಿಗೆ ಕಚ್ಚಿ ಗಾಯಗೊಳಿಸಿದ್ದಾಳೆ. ಅಷ್ಟೇ ಅಲ್ಲದೆ, ಆಕೆ ಜಗಳವಾಡುತ್ತಿದ್ದ ಇನ್ನೊಬ್ಬ ಮಹಿಳೆಗೂ ಗಾಯ ಮಾಡಿದ್ದಾಳೆ.

ನಂತರ ಇಬ್ಬರು ಗಲಾಟೆಕೋರ ಪ್ರಯಾಣಿಕರನ್ನು ವಿಮಾನದಿಂದ ಕೆಳಗಿಳಿಸಲಾಯಿತು ಮತ್ತು ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರನ್ನು ಕರೆಯಲಾಯಿತು. ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿಯ ಪ್ರಕಾರ, ಹಲ್ಲೆಗೊಳಗಾದ ಏರ್ ಹೋಸ್ಟೆಸ್‌ಗೆ ತೋಳಿಗೆ ಸಣ್ಣ ಗಾಯಗಳಾಗಿದ್ದು, ವೈದ್ಯಕೀಯ ಚಿಕಿತ್ಸೆಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ವಿಮಾನಯಾನ ಸಂಸ್ಥೆ, ವೀಬೊದಲ್ಲಿ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದೆ. “ಈ ಘಟನೆಯಲ್ಲಿ ಭಾಗಿಯಾದ ಪ್ರಯಾಣಿಕರನ್ನು ವಿಚಾರಣೆಗಾಗಿ ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಶೆನ್ಜೆನ್ ಏರ್‌ಲೈನ್ಸ್ ತನ್ನ ಪ್ರಯಾಣಿಕರು ಮತ್ತು ಉದ್ಯೋಗಿಗಳ ಕಾನೂನುಬದ್ಧ ಹಕ್ಕುಗಳು ಮತ್ತು ಹಿತಾಸಕ್ತಿಗಳನ್ನು ರಕ್ಷಿಸಲು ಬದ್ಧವಾಗಿದೆ. ಎಲ್ಲಾ ಪ್ರಯಾಣಿಕರು ವಿಮಾನ ನಿಯಮಗಳನ್ನು ಪಾಲಿಸಬೇಕು ಮತ್ತು ನಾಗರಿಕ ರೀತಿಯಲ್ಲಿ ಪ್ರಯಾಣಿಸಬೇಕು ಎಂದು ನಾವು ಬಯಸುತ್ತೇವೆ,” ಎಂದು ಸಂಸ್ಥೆ ತಿಳಿಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read