ಅಹಮದಾಬಾದ್: ಕಾಂಗ್ರೆಸ್ ಪಕ್ಷ ಸಂಘಟನೆ, ಚುನಾವಣೆ ಸಿದ್ಧತೆ ಸೇರಿ ಹಲವು ವಿಷಯಗಳ ಬಗ್ಗೆ ಮಹತ್ವದ ಚರ್ಚೆ ನಡೆಸುವ ಉದ್ದೇಶದಿಂದ ಇಂದಿನಿಂದ ಎರಡು ದಿನಗಳ ಕಾಲ ಗುಜರಾತ್ ನ ಅಹಮದಾಬಾದ್ ನಲ್ಲಿ ಎಐಸಿಸಿ ಅಧಿವೇಶನ ಹಮ್ಮಿಕೊಳ್ಳಲಾಗಿದೆ.
ಮುಂದಿನ ಚುನಾವಣೆಗಳಿಗೆ ಸಿದ್ಧತೆ, ಪಕ್ಷದ ಬಲವರ್ಧನೆ, ಸಾಂಸ್ಥಿಕ ಬದಲಾವಣೆ ತರುವ ಬಗ್ಗೆ ಅಧಿವೇಶನದಲ್ಲಿ ಚರ್ಚೆ ನಡೆಯಲಿದೆ. ಮಂಗಳವಾರ ಮತ್ತು ಬುಧವಾರ ಎರಡು ದಿನಗಳ ಅಧಿವೇಶನ ನಡೆಯಲಿದೆ.
ಏ. 8ರಂದು ಅಹಮದಾಬಾದ್ ನ ಸರ್ದಾರ್ ವಲ್ಲಭಬಾಯ್ ಪಟೇಲ್ ಸ್ಮಾರಕದಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಭೆ ನಡೆಯಲಿದೆ. ಏಪ್ರಿಲ್ 9ರಂದು ಎಐಸಿಸಿಯ ಚುನಾಯಿತ ಸದಸ್ಯರು, ಸಂಸದರು, ಸಚಿವರು, ಹಿರಿಯ ನಾಯಕರು ಸೇರಿ 1725 ಎಐಸಿಸಿ ಸದಸ್ಯರು ಸಬರಾಮತಿ ದಡದಲ್ಲಿ ಸಭೆ ಸೇರಲಿದ್ದಾರೆ.
ಎರಡು ದಿನಗಳ ಕಾಲ ನಡೆಯಲಿರುವ ಎಐಸಿಸಿ ಅಧಿವೇಶನಕ್ಕಾಗಿ ರಾಜ್ಯದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವರು, ಎಐಸಿಸಿ ಸದಸ್ಯರ ದಂಡು ಅಹಮದಾಬಾದ್ ಗೆ ತಲುಪಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷತೆಯಲ್ಲಿ ನವ ಸತ್ಯಾಗ್ರಹ ಬೈಟಕ್ ನಡೆಯಲಿದ್ದು, ರಾಜ್ಯದ 70ಕ್ಕೂ ಅಧಿಕ ಮಂದಿ ಭಾಗವಹಿಸಿದ್ದಾರೆ.