ರೈತರೇ ಗಮನಿಸಿ : ಹೈಟೆಕ್ ಹಾರ್ವೆಸ್ಟರ್ ಹಬ್ ಗಳ ಸ್ಥಾಪನೆಗೆ ಅರ್ಜಿ ಆಹ್ವಾನ

ಕೃಷಿ ಇಲಾಖೆ ವತಿಯಿಂದ ಕೃಷಿ ಚಟುವಟಿಕೆಗಳಿಗೆ ಆಧುನಿಕ ತಂತ್ರಜ್ಞಾನದ ಬೃಹತ್ ಯಂತ್ರಗಳನ್ನು ಅಳವಡಿಸಿಕೊಂಡು ಸಕಾಲದಲ್ಲಿ ಕೃಷಿ ಕಾರ್ಯಗಳನ್ನು ನೆರವೇರಿಸಲು ಹೈಟೆಕ್ ಹಾರ್ವೆಸ್ಟರ್ ಹಬ್ಗಳ (ಕಟಾವು ಕೇಂದ್ರಗಳು) ಸ್ಥಾಪನೆಗಾಗಿ ಆಸಕ್ತ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಉಪ ಕೃಷಿ ನಿರ್ದೇಶಕ ಡಾ.ಎನ್.ಕೆಂಗೇಗೌಡ ಅವರು ತಿಳಿಸಿದ್ದಾರೆ.

ಕೃಷಿಯಲ್ಲಿ ಯಂತ್ರೋಪಕರಣಗಳ ಬಳಕೆ ಅಧಿಕ ಮಾಡುವ ನಿಟ್ಟಿನಲ್ಲಿ ಮತ್ತು ಕೃಷಿ ಯಂತ್ರಧಾರೆ ಕೇಂದ್ರಗಳನ್ನು ಇನ್ನಷ್ಟು ಬಲ ಪಡಿಸಲು, ಹೈಟೆಕ್ ಹಾರ್ವೆಸ್ಟರ್ ಹಬ್ ಯೋಜನೆಗಳನ್ನು ಅನುಷ್ಟಾನ ಮಾಡಲು ಸರ್ಕಾರದ ಆದೇಶವಾಗಿದ್ದು, ಹೈಟೆಕ್ ಹಾರ್ವೆಸ್ಟರ್ ಹಬ್ಗಳ (ಕಟಾವು ಕೇಂದ್ರಗಳು) ಸ್ಥಾಪನೆಗಾಗಿ ಅರ್ಹರು ಅರ್ಜಿ ಸಲ್ಲಿಸಬಹುದಾಗಿದೆ.

ಹೈಟೆಕ್ ಹಾರ್ವೆಸ್ಟರ್ ಹಬ್ಗಳನ್ನು ಬೆಳೆಯ ವಿಧ ಮತ್ತು ಕಟಾವು ಅವಧಿಯ ಆಧಾರದ ಮೇಲೆ ಕಾರಿಡಾರ್ ಮಾದರಿಯಲ್ಲಿ ಸ್ಥಾಪಿಸುವುದು. ಈ ಯಂತ್ರಗಳನ್ನು ಬಾಡಿಗೆಗೆ ನೀಡುವ ಮೂಲಕ ರೈತರು ಹೆಚ್ಚುವರಿ ಆದಾಯ ಪಡೆಯಬಹುದಾಗಿದೆ. ಹೈಟೆಕ್ ಹಾರ್ವೆಸ್ಟರ್ ಹಬ್ಗಳನ್ನು ಅನುಷ್ಟಾನ ಮಾಡಲು ಸಾಮಾನ್ಯ ವರ್ಗ ಹಾಗೂ ಪರಿಶಿಷ್ಟ ಪಂಗಡದ ವೈಯಕ್ತಿಕ ಫಲಾನುಭವಿಗಳು ಭಾಗವಹಿಸಬಹುದು.ಸಾಮಾನ್ಯ ವರ್ಗದ ರೈತರಿಗೆ ಗರಿಷ್ಠ ಶೇ.50 ರಂತೆ (ಗರಿಷ್ಠ ರೂ.40 ಲಕ್ಷ ಸಹಾಯಧನ), ಪರಿಶಿಷ್ಟ ಪಂಗಡದ ರೈತರಿಗೆ ಗರಿಷ್ಠ ಶೇ.70 ರಂತೆ (ಗರಿಷ್ಠ ರೂ.50 ಲಕ್ಷ) ಸಹಾಯಧನ ಪಡೆಯಲು ಅವಕಾಶವಿದೆ. ಕೃಷಿ ಯಂತ್ರೋಪಕರಣವಾರು ನಿಗದಿಪಡಿಸಿದ ಗರಿಷ್ಠ ಸಹಾಯಧನವನ್ನು ಒದಗಿಸಲಾಗುವುದು.

ಈ ಸಹಾಯಧನವನ್ನು ಕ್ರೆಡಿಟ್ ಲಿಂಕ್ಡ್ ಬ್ಯಾಕ್ ಎಂಡೆಡ್ ಸಬ್ಸಿಡಿ ಮೂಲಕ ಬಿಡುಗಡೆ ಮಾಡಲಾಗುವುದು. ಆಯ್ಕೆಯಾದ ಫಲಾನುಭವಿಗಳು ಕೃಷಿ ಮೂಲಭೂತ ಸೌಕರ್ಯ ನಿಧಿ ಸಾಲದ ನೆರವನ್ನು ಪಡೆಯಲು ಸಹ ಅವಕಾಶವಿದೆ.

ಆಯಾ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಸ್ವೀಕೃತವಾಗುವ ಎಲ್ಲಾ ಅರ್ಜಿಗಳನ್ನು ಮೇಲ್ಕಂಡ ಎಲ್ಲಾ ಅಂಶಗಳನ್ವಯ ಪರಿಶೀಲಿಸಿ ಸಂಬಂಧಿಸಿದ ಉಪ ಕೃಷಿ ನಿರ್ದೇಶಕರ ಮುಖಾಂತರ ಜಿಲ್ಲಾ ಜಂಟಿ ಕೃಷಿ ನಿರ್ದೇಶಕರಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಸಮೀಪದ ರೈತ ಸಂಪರ್ಕ ಕೇಂದ್ರ ಹಾಗೂ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಭೇಟಿ ಮಾಹಿತಿ ಪಡೆಯಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read