ಬೆಂಗಳೂರು: ಬಿಪಿಎಲ್, ಅಂತ್ಯೋದಯ ಪಡಿತರ ಚೀಟಿದಾರರಿಗೆ ಅನ್ನಭಾಗ್ಯ ಯೋಜನೆಯಡಿ ಹೆಚ್ಚುವರಿ 5 ಕೆಜಿ ಅಕ್ಕಿ ಬದಲಿಗೆ ಇಂದಿರಾ ಪೌಷ್ಟಿಕ ಆಹಾರ ಕಿಟ್ ವಿತರಿಸಲಾಗುವುದು.
ವಿತರಣೆ ಆರಂಭಿಸುವ ಮೊದಲೇ ಕಿಟ್ ನ ಪದಾರ್ಥ ಬದಲಾಗಿದೆ. ತೊಗರಿ ಬೆಳೆಗಾರರು ಮತ್ತು ದಾಸ್ತಾನುಗಾರರ ಹಿತದೃಷ್ಟಿಯಿಂದ ಒಂದು ಕೆಜಿ ಹೆಸರುಕಾಳು ಕೈ ಬಿಟ್ಟು ಅದೇ ವೆಚ್ಚದಲ್ಲಿ ಹೆಚ್ಚುವರಿ ತೊಗರಿ ಬೇಳೆ ವಿತರಿಸಲು ಸರ್ಕಾರ ನಿರ್ಧರಿಸಿದೆ.
ಉತ್ತರ ಕರ್ನಾಟಕ ಸೇರಿದಂತೆ ಇತರೆ ಭಾಗಗಳಲ್ಲಿ ಪ್ರಮುಖ ಬೆಳೆಯಾಗಿ ರೈತರು ತೊಗರಿ ಬೆಳೆಯುತ್ತಾರೆ. ತೊಗರಿ ಬೆಳೆಗಾರರ ಹಿತ ಕಾಪಾಡಲು ಮತ್ತು ಪಡಿತರ ಚೀಟಿದಾರರಿಗೆ ಇನ್ನು ಹೆಚ್ಚಿನ ಪ್ರೋಟೀನ್ ಯುಕ್ತ ಪೌಷ್ಟಿಕಾಂಶ ಒದಗಿಸುವ ಉದ್ದೇಶದಿಂದ ಸಿಎಂ ಸಿದ್ದರಾಮಯ್ಯ ಮುಂದೆ ಪ್ರಸ್ತಾವನೆ ಇಡಲಾಗಿತ್ತು. ಸಂಪುಟ ಸಭೆಯಲ್ಲಿ ಇದಕ್ಕೆ ಅನುಮೋದನೆ ನೀಡಲಾಗಿದೆ.
ಅನ್ನಭಾಗ್ಯ ಯೋಜನೆಯಡಿ ಫಲಾನುಭವಿಗಳಿಗೆ ಹೆಚ್ಚುವರಿ 5 ಕೆಜಿ ಅಕ್ಕಿ ವಿತರಿಸಲು ವಾರ್ಷಿಕ 6426 ಕೋಟಿ ರೂಪಾಯಿ ವೆಚ್ಚವಾಗುತ್ತದೆ. ಇಂದಿರಾ ಪೌಷ್ಟಿಕ ಆಹಾರ ಕಿಟ್ ಗೆ 6119.52 ಕೋಟಿ ರೂ. ವೆಚ್ಚವಾಗುವ ಅಂದಾಜಿದ್ದು, ಸುಮಾರು 300 ಕೋಟಿ ರೂ.ನಷ್ಟು ಉಳಿತಾಯವಾಗುತ್ತದೆ.
ಇಂದಿರಾ ಪೌಷ್ಟಿಕ ಆಹಾರ ಕಿಟ್ ನಲ್ಲಿ ಒಂದು ಲೀಟರ್ ಅಡುಗೆ ಎಣ್ಣೆ, ಒಂದು ಕೆಜಿ ಉಪ್ಪು, ಒಂದು ಕೆಜಿ ತೊಗರಿ ಬೇಳೆ, ಒಂದು ಕೆಜಿ ಹೆಸರು ಕಾಳು ಒಳಗೊಂಡಿದ್ದು, ಒಂದು ಕೆಜಿ ಹೆಸರು ಕಾಳು ಬದಲಿಗೆ ಒಂದು ಕೆಜಿ ತೊಗರಿ ಬೇಳೆ ಹೆಚ್ಚುವರಿಯಾಗಿ ನೀಡಲಾಗುವುದು ಎನ್ನಲಾಗಿದೆ.
