ಬೆಂಗಳೂರು: ದಸರಾ ರಜೆಗಳನ್ನು ವಿಸ್ತರಿಸಿದ್ದರಿಂದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಕೊರತೆಯಾಗುವ ಶಾಲಾ ದಿನಗಳ ಬೋಧನಾ ಕಲಿಕೆ ಸರಿದೂಗಿಸುವ ಕುರಿತು ಶಾಲಾ ಶಿಕ್ಷಣ ಇಲಾಖೆ ಆಯುಕ್ತರು ಸೂಚನೆ ನೀಡಿದ್ದಾರೆ.
2025-26 ನೇ ಸಾಲಿನಲ್ಲಿ ಶಾಲೆಗಳಲ್ಲಿ ಹಮ್ಮಿಕೊಳ್ಳಬೇಕಾದ ಚಟುವಟಿಕೆಗಳನ್ನು ಒಳಗೊಂಡ ಶೈಕ್ಷಣಿಕ ಮಾರ್ಗಸೂಚಿ ನೀಡಲಾಗಿದೆ. ಸದರಿ ಮಾರ್ಗಸೂಚಿಯಲ್ಲಿ 2025-26 ನೇ ಸಾಲಿನ ದಸರಾ ರಜೆ ಅವಧಿಯನ್ನು ದಿನಾಂಕ: 22/09/2025 ರಿಂದ 07/10/2025 ರ ವರೆಗೆ ನಿಗದಿಗೊಳಿಸಲಾಗಿತ್ತು.
ರಾಜ್ಯ ಸರ್ಕಾರದ ನಿರ್ದೇಶನದ ಮೇರೆಗೆ ದಸರಾ ರಜಾ ಅವಧಿಯಲ್ಲಿ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಶಿಕ್ಷಕರನ್ನು ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷಾ ಕಾರ್ಯಕ್ಕೆ ನಿಯೋಜಿಸಲಾಗಿದ್ದು, ಸದರಿ ಕಾರ್ಯ ದಸರಾ ರಜೆಯಲ್ಲಿ ಆರಂಭಗೊಂಡಿರುತ್ತದೆ. ಸಮೀಕ್ಷೆ ಪೂರ್ಣಗೊಳ್ಳದ ಕಾರಣ ಉಲ್ಲೇಖ(4) ರಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ(ರಿ) ಬೆಂಗಳೂರು ರವರು ಸನ್ಮಾನ್ಯ ಮುಖ್ಯ ಮಂತ್ರಿಗಳಿಗೆ ನೀಡಿದ ಮನವಿ ಪತ್ರ ದಿನಾಂಕ:06.10.2025 ರಲ್ಲಿ ಈ ಸಮೀಕ್ಷೆಯನ್ನು ಪೂರ್ಣಗೊಳಿಸಲು ಹೆಚ್ಚಿನ ಕಾಲಾವಕಾಶ ಅವಶ್ಯಕತೆ ಇದ್ದು ಸಮೀಕ್ಷೆಯನ್ನು ಪೂರ್ಣಗೊಳಿಸಲು ಶಾಲೆಗಳಿಗೆ ಹೆಚ್ಚುವರಿ ದಸರಾ ರಜೆಗಳನ್ನು ನೀಡಿ ಸಮೀಕ್ಷೆ ಪೂರ್ಣಗೊಳಿಸಲು ಅವಕಾಶ ಕಲ್ಪಿಸಬೇಕೆಂದು ಮನವಿ ಮಾಡಿರುತ್ತಾರೆ ಹಾಗೂ ವಿದ್ಯಾರ್ಥಿಗಳಿಗೆ ಮುಂದೆ ವಿಶೇಷ ಬೋಧನಾ ಅವಧಿಗಳನ್ನು ನಡೆಸಲಾಗುವುದು ಎಂದಿರುತ್ತಾರೆ. ಮಾನ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಕರ್ನಾಟಕ ಸರ್ಕಾರ ಇವರು ನಮೂದಿಸಿದ ಟಿಪ್ಪಣಿಯಲ್ಲಿ ಸದರಿ ಮನವಿ ಕುರಿತು ಮಾನ್ಯ ಮುಖ್ಯ ಮಂತ್ರಿಗಳು ನೀಡುವ ಸೂಚನೆಯಂತೆ ಕ್ರಮವಹಿಸಿ ಎಂದು ನಿರ್ದೇಶಿಸಿರುತ್ತಾರೆ.
ಮುಖ್ಯಮಂತ್ರಿಗಳು ದಿನಾಂಕ:07.10.2025 ರ ವರೆಗೆ ನಿಗದಿಯಾಗಿದ್ದ ದಸರಾ ರಜೆಯನ್ನು ದಿನಾಂಕ:18.10.2025 ರ ವರೆಗೆ ವಿಸ್ತರಿಸಿ ಆದೇಶಿಸಿರುತ್ತಾರೆ. ಅದರಂತೆ ಉಲ್ಲೇಖ(2)ರ ಈ ಕಛೇರಿಗೆ ಜ್ಞಾಪನ ದಿನಾಂಕ:07.10.2025 ರಂತೆ ದಿನಾಂಕ:7.10.2025 ರ ವರೆಗೆ ನಿಗದಿಯಾಗಿದ್ದ ದಸರಾ ರಜೆಯನ್ನು ದಿನಾಂಕ:18.10.2025 ರ ವರೆಗೆ ವಿಸ್ತರಿಸಿ ಆದೇಶಿಸಲಾಗಿದೆ.
ದಸರಾ ರಜೆಗಳನ್ನು ವಿಸ್ತರಿಸಿದ್ದರಿಂದ ಈ ಅವಧಿಯಲ್ಲಿ ಕಳೆದುಕೊಳ್ಳುವ ಶಾಲಾ ದಿನಗಳು (ಕಾರ್ಯನಿರತ ದಿನಗಳು) 8,9,10,11,13 ರಿಂದ 18 ಆಗಿದ್ದು, ಒಟ್ಟಾರೆ 10 ಶಾಲಾ ದಿನಗಳ ಕೊರತೆಯಾಗಿದೆ. ಇದರಲ್ಲಿ 8 ಪೂರ್ಣದಿನ ಮತ್ತು 2 ಅರ್ಧದಿನಗಳಾಗಿರುತ್ತದೆ.
(ಎ) ಪ್ರೌಢ ಶಾಲೆಗಳಿಗೆ ಸಂಬಂಧಿಸಿದಂತೆ 8 ಪೂರ್ಣ ದಿನ & 2 ಅರ್ಧ ದಿನಗಳು, ಪ್ರತಿ ಅವಧಿಯ ಸಮಯ 45 ನಿಮಿಷಗಳು ಆಗಿದೆ.
8 ಪೂರ್ಣ ದಿನಗಳು 8*7-56 ಅವಧಿಗಳು
2 ಅರ್ಧ ದಿನಗಳು- 2*5=10 ಅವಧಿಗಳು
ಒಟ್ಟು 66 ಅವಧಿಗಳು
ಇದಕ್ಕೆ ಪರಿಹಾರವಾಗಿ ಕೊರತೆಯಾಗುವ ಕಲಿಕಾ ಅವಧಿಗಳನ್ನು ಸರಿದೂಗಿಸಲು ಹಾಗೂ ಕಲಿಕಾ ಕೊರತೆಯನ್ನು ಸರಿದೂಗಿಸಲು ಈ ಕೆಳಕಂಡ ಕ್ರಮಗಳನ್ನು ಸರ್ಕಾರಿ ಮತ್ತು ಅನುದಾನಿತ ಪ್ರೌಢಶಾಲೆಗಳಲ್ಲಿ ಕೈಗೊಳ್ಳಲು ತಿಳಿಸಿದೆ.
ದಿನಾಂಕ:07.11.2025 ರಿಂದ 24.01.2026 ರವರೆಗೆ ಒಟ್ಟು 66 ಕರ್ತವ್ಯದ ದಿನಗಳಂದು ಪ್ರತಿ ದಿನ ಹೆಚ್ಚುವರಿ ಅವಧಿಯನ್ನು ನಿರ್ವಹಿಸಿ ಕಲಿಕಾ ಅವಧಿಗಳನ್ನು ಸರಿದೂಗಿಸಿಕೊಳ್ಳುವುದು.
ಇದಕ್ಕಾಗಿ ಎಲ್ಲಾ ಸರ್ಕಾರಿ ಹಾಗೂ ಅನುದಾನಿತ ಪ್ರೌಢಶಾಲೆಗಳಲ್ಲಿ 8.9.10 ನೇ ತರಗತಿಗಳಿಗೆ ಈ ದಿನಗಳಲ್ಲಿ ಒಂದು ಹೆಚ್ಚುವರಿ ಅವಧಿಯನ್ನು ಶಾಲಾ ಪ್ರಾರಂಭದಲ್ಲಿ ಅಥವಾ ಶಾಲಾ ಅವಧಿ ನಂತರದಲ್ಲಿ ಆಯಾ ಸ್ಥಳೀಯ ಪರಿಸ್ಥಿತಿಗೆ ಅನುಗುಣವಾಗಿ ತೆಗೆದುಕೊಳ್ಳುವುದು.
ಜನವರಿ 2026 ರಿಂದ ಮಾರ್ಚ್ 2026(ಪರೀಕ್ಷೆವರೆಗೆ) ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ವಿಶೇಷ ತರಗತಿಗಳನ್ನು ನಡೆಸುವುದು.
10 ನೇ ತರಗತಿ (ಎಸ್.ಎಸ್.ಎಲ್.ಸಿ) ವಿದ್ಯಾರ್ಥಿಗಳಿಗೆ ಫಲಿತಾಂಶ ಸುಧಾರಣೆಗಾಗಿ ವಿಶೇಷ ಗಮನ ಹರಿಸಿ ಕ್ರಮವಹಿಸುವುದು.
(ಬಿ) ಪ್ರಾಥಮಿಕ ಶಾಲೆಗಳಿಗೆ ಸಂಬಂಧಿಸಿದಂತೆ 8 ಪೂರ್ಣ ದಿನ & 2 ಅರ್ಧ ದಿನಗಳು, ಪ್ರತಿ ಅವಧಿಯ ಸಮಯ 40 ನಿಮಿಷಗಳು ಆಗಿದೆ.
8 ಪೂರ್ಣ ದಿನಗಳು 8*8=64 ಅವಧಿಗಳು
2 ಅರ್ಧ ದಿನಗಳು 2*5=10 ಅವಧಿಗಳು
ಒಟ್ಟು 74 ಅವಧಿಗಳು
ದಿನಾಂಕ:07.11.2025 ರಿಂದ 05.02.2026 ರವರೆಗೆ ಒಟ್ಟು 74 ಕರ್ತವ್ಯದ ದಿನಗಳಂದು ಪ್ರತಿ ದಿನ ಹೆಚ್ಚುವರಿ ಅವಧಿಯನ್ನು ನಿರ್ವಹಿಸಿ ಕಲಿಕಾ ಅವಧಿಗಳನ್ನು ಸರಿದೂಗಿಸಿಕೊಳ್ಳುವುದು.
ಇದಕ್ಕಾಗಿ ಎಲ್ಲಾ ಸರ್ಕಾರಿ ಹಾಗೂ ಅನುದಾನಿತ ಪ್ರಾಥಮಿಕ ಶಾಲೆಗಳಲ್ಲಿ 1 ರಿಂದ 7/8 ನೇ ತರಗತಿಗಳಿಗೆ ಈ ದಿನಗಳಲ್ಲಿ ಒಂದು ಹೆಚ್ಚುವರಿ ಅವಧಿಯನ್ನು ಶಾಲಾ ಪ್ರಾರಂಭದಲ್ಲಿ ಅಥವಾ ಶಾಲಾ ಅವಧಿ ನಂತರದಲ್ಲಿ ಆಯಾ ಸ್ಥಳೀಯ ಪರಿಸ್ಥಿತಿಗೆ ಅನುಗುಣವಾಗಿ ತೆಗೆದುಕೊಳ್ಳುವುದು.
ಜನವರಿ 2026 ರಿಂದ ಮಾರ್ಚ್ 2026 (ಪರೀಕ್ಷೆವರೆಗೆ) ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ವಿಶೇಷ ತರಗತಿಗಳನ್ನು ನಡೆಸುವುದು ಎಂದು ಸೂಚನೆ ನೀಡಲಾಗಿದೆ.


