ಬೆಂಗಳೂರು: ನಟಿ ರನ್ಯಾ ರಾವ್ ಚಿನ್ನ ಕಳ್ಳ ಸಾಗಣೆ ಪ್ರಕರಣ ಸಂಬಂಧ ಕಂದಾಯ ಗುಪ್ತಚರ ನಿರ್ದೇಶನಾಲಯ(ಡಿಆರ್‌ಐ) ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದೆ. ಆರೋಪಿಗಳು ಕೆಲ ತಿಂಗಳ ಅವಧಿಯಲ್ಲಿ 127 ಕೆಜಿ ಚಿನ್ನ ಅಕ್ರಮವಾಗಿ ಸಾಗಾಟ ಮಾಡಿದ್ದಾರೆ ಎಂದು ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಲಾಗಿದೆ.
ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯಕ್ಕೆ ಡಿ.ಆರ್.ಐ. ಅಧಿಕಾರಿಗಳು 350 ಪುಟಗಳ ದೂರಿನ ಪ್ರತಿ ಜೊತೆಗೆ 2200 ಪುಟಗಳ ಆರೋಪ ಪಟ್ಟಿ ಸಲ್ಲಿಸಿದ್ದಾರೆ. 104 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಚಿನ್ನವನ್ನು ಕಳ್ಳ ಸಾಗಣೆ ಮಾಡಲಾಗಿದೆ ಎಂದು ಅಂದಾಜಿಸಲಾಗಿದೆ.
ದುಬೈನಿಂದ ಅಕ್ರಮವಾಗಿ ಬೆಂಗಳೂರಿಗೆ 14 ಕೆಜಿ ಚಿನ್ನದ ಗಟ್ಟಿ ಸಾಗಿಸುವಾಗ ಹಿರಿಯ ಐಪಿಎಸ್ ಅಧಿಕಾರಿ ರಾಮಚಂದ್ರರಾವ್ ಅವರ ಮಲ ಮಗಳು ರನ್ಯಾ ರಾವ್ ಅವರನ್ನು ಡಿ.ಆರ್.ಐ. ಅಧಿಕಾರಿಗಳು ಮಾರ್ಚ್ 3ರಂದು ಏರ್ಪೋರ್ಟ್ ನಲ್ಲಿ ಬಂಧಿಸಿದ್ದರು.
ನಂತರ ರನ್ಯಾ ರಾವ್ ಅವರ ಸಹಚರರಾದ ತರುಣ್ ಕೆ. ರಾಜು, ಸಾಹಿಲ್ ಸಕಾರಿಯಾ ಜೈನ್, ಭರತ್ ಕುಮಾರ್ ಜೈನ್ ಅವರನ್ನು ಬಂಧಿಸಲಾಗಿತ್ತು. ತನಿಖೆ ಪೂರ್ಣಗೊಳಿಸಿದ ಡಿ.ಆರ್.ಐ. ಅಧಿಕಾರಿಗಳು ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ರನ್ಯಾ ರಾವ್ ಸೇರಿದಂತೆ ಇತರೆ ಆರೋಪಿಗಳು ಬೆಂಗಳೂರಿನ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ.
