ಮುಂಬೈ ತೊರೆದು ಬಿಕಾನೇರಿಗೆ ಚಾರು ; ಜೀವನೋಪಾಯಕ್ಕೆ ಬಟ್ಟೆ ಮಾರಾಟಕ್ಕೆ ಮುಂದಾದ ನಟಿ !

ನಟಿ ಚಾರು ಅಸೋಪಾ ತಮ್ಮ ಮಗಳು ಜಿಯಾನಾ ಜೊತೆ ಮುಂಬೈನ ಗದ್ದಲದಿಂದ ದೂರ ಸರಿದು ತಮ್ಮ ತವರು ಪಟ್ಟಣವಾದ ರಾಜಸ್ಥಾನದ ಬಿಕಾನೇರ್‌ಗೆ ಶಿಫ್ಟ್ ಆಗಿದ್ದಾರೆ. ಇತ್ತೀಚೆಗೆ ಚಾರು, ಸಲ್ವಾರ್ ಕಮೀಜ್ ಮತ್ತು ಸೀರೆಗಳನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಇದು ಮಿಶ್ರ ಪ್ರತಿಕ್ರಿಯೆಗಳಿಗೆ ಕಾರಣವಾಗಿದೆ. ಕೆಲವರು ಚಾರು ಅವರ ಈ ಹೊಸ ಪ್ರಯತ್ನವನ್ನು ಬೆಂಬಲಿಸಿದರೆ, ಇನ್ನೂ ಕೆಲವರು ಅವರ ಆರ್ಥಿಕ ಪರಿಸ್ಥಿತಿಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.

ʼಹಿಂದೂಸ್ತಾನ್ ಟೈಮ್ಸ್‌ʼ ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಚಾರು ಅಸೋಪಾ ತಾವು ಆನ್‌ಲೈನ್‌ನಲ್ಲಿ ಬಟ್ಟೆ ಮಾರಾಟ ಮಾಡುತ್ತಿರುವುದನ್ನು ಖಚಿತಪಡಿಸಿದ್ದಾರೆ. “ಹೌದು, ನಾನು ನನ್ನ ತವರು ಪಟ್ಟಣವಾದ ರಾಜಸ್ಥಾನದ ಬಿಕಾನೇರ್‌ಗೆ ಬಂದಿದ್ದೇನೆ. ಸದ್ಯಕ್ಕೆ ಮುಂಬೈ ತೊರೆದು ನನ್ನ ಪೋಷಕರ ಜೊತೆ ವಾಸಿಸುತ್ತಿದ್ದೇನೆ. ಜಿಯಾನಾ ಮತ್ತು ನಾನು ಇಲ್ಲಿಗೆ ಬಂದು ಒಂದು ತಿಂಗಳು ದಾಟಿದೆ” ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಮುಂಬೈನಲ್ಲಿ ಜೀವನ ನಿರ್ವಹಣೆ ದುಬಾರಿಯಾಗಿರುವುದರಿಂದ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಚಾರು ಹೇಳಿದ್ದಾರೆ. “ಮುಂಬೈನಲ್ಲಿ ಬಾಡಿಗೆ ಮತ್ತು ಇತರ ಖರ್ಚುಗಳು ಸೇರಿ ತಿಂಗಳಿಗೆ ಸುಮಾರು 1 ರಿಂದ 1.5 ಲಕ್ಷ ರೂಪಾಯಿ ಖರ್ಚಾಗುತ್ತಿತ್ತು. ಅದರ ಜೊತೆಗೆ, ಮುಂಬೈನ ಹೊರವಲಯದಲ್ಲಿ ಶೂಟಿಂಗ್ ಇದ್ದಾಗ ನನ್ನ ಮಗಳನ್ನು ಒಬ್ಬಂಟಿಯಾಗಿ ದಾದಿಯೊಂದಿಗೆ ಬಿಟ್ಟು ಹೋಗುವುದು ತುಂಬಾ ಕಷ್ಟವಾಗುತ್ತಿತ್ತು. ಹಾಗಾಗಿ, ನನ್ನ ಮನೆಗೆ ಹಿಂತಿರುಗಿ ನನ್ನದೇ ಆದ ಉದ್ಯಮವನ್ನು ಪ್ರಾರಂಭಿಸುವುದು ನನ್ನ ಯೋಜಿತ ನಿರ್ಧಾರವಾಗಿತ್ತು” ಎಂದು ಅವರು ವಿವರಿಸಿದ್ದಾರೆ.

ತಮ್ಮ ಈ ನಿರ್ಧಾರದ ಬಗ್ಗೆ ಟ್ರೋಲ್ ಮಾಡುತ್ತಿರುವವರಿಗೆ ಖಡಕ್ ಉತ್ತರ ನೀಡಿದ ಚಾರು, “ಯಾವುದೇ ಹೊಸ ಕೆಲಸ ಶುರು ಮಾಡಿದಾಗ ಎಲ್ಲರೂ ಕಷ್ಟಪಡುತ್ತಾರೆ. ನನ್ನ ವಿಷಯದಲ್ಲಿ ಮಾತ್ರ ಯಾಕೆ ಭಿನ್ನವಾಗಿರಬೇಕು? ಆರ್ಡರ್ ತಗೊಳ್ಳೋದ್ರಿಂದ ಹಿಡಿದು ಪ್ಯಾಕೇಜ್ ಕಳುಹಿಸೋದು, ಸ್ಟಾಕ್ ತರಿಸಿಕೊಳ್ಳೋದು ಎಲ್ಲವನ್ನೂ ನಾನೇ ಮಾಡ್ತಿದ್ದೀನಿ. ನಟನೆಗೋಸ್ಕರ ಮುಂಬೈಗೆ ಬಂದಾಗಲೂ ಕಷ್ಟಪಟ್ಟಿದ್ದೆ. ಈಗ ನನ್ನ ಮಗಳಿಗೋಸ್ಕರ ಈ ಉದ್ಯಮ ಶುರು ಮಾಡಿದ್ದೀನಿ. ಇದರಲ್ಲಿ ಯಾವುದೇ ತಪ್ಪು ಕಾಣ್ತಿಲ್ಲ” ಎಂದು ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.

ತಮ್ಮ ಈ ನಿರ್ಧಾರದ ಬಗ್ಗೆ ಮಾಜಿ ಪತಿ ರಾಜೀವ್ ಸೇನ್ ಅವರ ಪ್ರತಿಕ್ರಿಯೆ ಕುರಿತು ಕೇಳಿದಾಗ, “ಅವರು ಯಾವಾಗ ಬೇಕಾದರೂ ಬಿಕಾನೇರ್‌ಗೆ ಬಂದು ನನ್ನ ಮಗಳನ್ನು ಭೇಟಿ ಮಾಡಬಹುದು. ನಾನು ಮುಂಬೈ ಬಿಡುವ ಮೊದಲು ನನ್ನ ಯೋಜನೆಗಳ ಬಗ್ಗೆ ಅವರಿಗೆ ಮೆಸೇಜ್ ಮಾಡಿದ್ದೆ” ಎಂದು ಚಾರು ಹೇಳಿದ್ದಾರೆ.

ಆನ್‌ಲೈನ್‌ನಲ್ಲಿ ಬಟ್ಟೆ ಮಾರಾಟ ಮಾಡಲು ಕಾರಣವನ್ನು ವಿವರಿಸಿದ ಚಾರು, “ನಾನು ಸದ್ಯಕ್ಕೆ ಯಾವುದೇ ದೊಡ್ಡ ಪ್ರಾಜೆಕ್ಟ್‌ಗಳಲ್ಲಿ ಕೆಲಸ ಮಾಡ್ತಿಲ್ಲ. ನನ್ನ ಮಗಳ ಮೇಲೆ ಹೆಚ್ಚು ಗಮನ ಕೊಡಬೇಕು ಅಂತ ಇದ್ದಿದ್ದರಿಂದ ಸೀರಿಯಲ್‌ಗಳಲ್ಲಿ ನಟಿಸೋಕೆ ಇಷ್ಟ ಇಲ್ಲ. ಅದರ ಬದಲು ಮನೆಯಿಂದಲೇ ಡಿಜಿಟಲ್ ಕಂಟೆಂಟ್ ಶೂಟ್ ಮಾಡಬಹುದು. ಒಂದು ವೇಳೆ ಶೂಟಿಂಗ್‌ಗೆ ಹೋಗಬೇಕಾದ್ರೆ, ಮಗಳನ್ನು ದಾದಿಗಿಂತ ಹೆಚ್ಚಾಗಿ ಅಜ್ಜಿಯಂದಿರ ಜೊತೆ ಬಿಟ್ಟು ಹೋಗೋದು ನನಗೆ ಹೆಚ್ಚು ಸರಿ ಅನ್ನಿಸುತ್ತೆ” ಎಂದು ತಮ್ಮ ಮಾತನ್ನು ಮುಗಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read