ವಿಜಯಪುರ: ಸ್ಯಾಂಡಲ್ ವುಡ್ ನಟ, ಹಿರಿಯ ರಂಗಕರ್ಮಿ ರಾಜು ತಾಳಿಕೋಟೆ(60) ಸೋಮವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಹೆಬ್ರಿಯ ಕಬ್ಬಿನಾಲೆಯಲ್ಲಿ ಚಿತ್ರೀಕರಣದ ವೇಳೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ತಾಳಿಕೋಟೆಯವರಾದ ರಾಜು ತಾಳಿಕೋಟೆ(ರಾಜೇಸಾಬ್ ಮುಕ್ತುಮ್ ಸಾಬ್) ಅವರು ನಟ ಶೈನ್ ಶೆಟ್ಟಿ ಅವರ ‘ಶಂಕರಾಭರಣ’ ಸಿನಿಮಾ ಚಿತ್ರೀಕರಣಕ್ಕಾಗಿ ಉಡುಪಿಗೆ ಆಗಮಿಸಿದ್ದರು. ಭಾನುವಾರ ತಡರಾತ್ರಿ ಉಸಿರಾಟ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಹೆಬ್ರಿ ಆಸ್ಪತ್ರೆಗೆ ಅವರನ್ನು ದಾಖಲಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ತುರ್ತಾಗಿ ಅವರಿಗೆ ಆಂಜಿಯೋಪ್ಲಾಸ್ಟಿ ಮಾಡಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಸಂಜೆ ಕೊನೆಯುಸಿರೆಳೆದಿದ್ದಾರೆ. ಪಾರ್ಥೀವ ಶರೀರವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ. ಮಂಗಳವಾರ ಬೆಳಗ್ಗೆ 7ರಿಂದ 8 ಗಂಟೆಯವರೆಗೆ ಧಾರವಾಡ ರಂಗಾಯಣದ ಆವರಣದಲ್ಲಿ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗುವುದು. ಮಧ್ಯಾಹ್ನ 2 ಗಂಟೆಗೆ ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಚಿಕ್ಕ ಸಿಂದಗಿ ಗ್ರಾಮದಲ್ಲಿರುವ ತೋಟದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುವುದು.