ಅಹಮದಾಬಾದ್: ಪತಿಗೆ ಅಕ್ರಮ ಸಂಬಂಧವಿರಬಹುದು ಎಂಬ ಅನುಮಾನದಲ್ಲಿ ಪತ್ನಿ ಪತಿ ಮೇಲೆ ಆಸಿಡ್ ದಾಳಿ ನಡೆಸಿರುವ ಘಟನೆ ಗುಜರಾತ್ ನ ಅಹಮದಾಬಾದ್ ನಲ್ಲಿ ನಡೆದಿದೆ.
ಆಸಿಡ್ ದಾಳಿಯಿಂದಾಗಿ ಪತಿ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಪತಿ ದೂರಿನ ಮೇರೆಗೆ ಪತ್ನಿಯನ್ನು ಬಂಧಿಸಲಾಗಿದೆ. ೩೩ ವರ್ಷದ ರೋಣಕ್ ಹಲ್ಲೆಗೊಳಗಾದ ವ್ಯಕ್ತಿ.
ಕಳೆದ ಒಂದು ವರ್ಷದಿಂದ ಪತ್ನಿ ತನ್ನೊಂದಿಗೆ ಅನಗತ್ಯವಾಗಿ ಜಗಳವಾಡುತ್ತಿದ್ದಳು. ದೀಪಾವಳಿ ಹಬ್ಬದಂದು ಮತ್ತೆ ಜಗಳ ಮಾಡಿದ್ದಾಳೆ. ಬೆಳಿಗ್ಗೆಯಿಂದಲೇ ಗಲಾಟೆ ಶುರುಮಾಡಿದ್ದಳು. ಹಬ್ಬದ ದಿನದಂದು ಜಗಳ ಬೇಡ ಎಂದು ಮೌನವಾಗಿದ್ದೆ. ಮಲಗಿದ್ದ ವೇಳೆ ನನ್ನ ಮೇಲೆ ಏಕಾಏಕಿ ಆಸಿಡ್ ಎರಚಿದ್ದಾಳೆ ಎಂದು ದೂರು ನೀಡಿದ್ದಾನೆ. ಗಂಭೀರವಾಗಿ ಗಾಯಗೊಂಡಿರುವ ರೋಣಕ್ ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಪತಿಗೆ ಬೇರೊಬ್ಬಳ ಜೊತೆ ಸಂಬಂಧವಿದೆ ಎಂಬುದು ಪತ್ನಿಯ ವಾದ. ಇದೇ ಕಾರಣಕ್ಕೆ ಪತ್ನಿ ಪದೇ ಪದೇ ಗಲಾಟೆ ಮಾಡುತ್ತಿದ್ದಳು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.