ಶಿವಮೊಗ್ಗ: ಬೀದಿ ದೀಪ ನಿರ್ವಹಣೆ ಸಿಬ್ಬಂದಿ ವಿದ್ಯುತ್ ಪ್ರವಹಿಸಿ ಮೃತಪಟ್ಟ ಘಟನೆ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಕಡ್ತೂರಿನಲ್ಲಿ ನಡೆದಿದೆ.
ಅರೇಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬೀದಿ ದೀಪ ನಿರ್ವಹಣೆ ಕೆಲಸ ಮಾಡುತ್ತಿದ್ದ ಏರಿಗದ್ದೆ ರಫೀಕ್(46) ಮೃತಪಟ್ಟವರು. ಕಡ್ತೂರಿನಲ್ಲಿ ಹಾಳಾಗಿದ್ದ ಬೀದಿ ದೀಪ ಬದಲಾಯಿಸುವಾಗ ಅವರು ವಿದ್ಯುತ್ ಕಂಬ ಹತ್ತಲು ಸಿಲ್ವರ್ ಏಣಿ ಬಳಸಿದ್ದಾರೆ. ವಿದ್ಯುತ್ ತಂತಿಗೆ ಏಣಿ ಸ್ಪರ್ಶಿಸಿದ ವೇಳೆ ವಿದ್ಯುತ್ ಪ್ರವಹಿಸಿ ರಫೀಕ್ ಅಸ್ವಸ್ಥರಾಗಿದ್ದಾರೆ. ಅವರನ್ನು ಆಸ್ಪತ್ರೆಗೆ ಕರೆ ತರುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಆಗುಂಬೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.