ಉಡುಪಿ: ಕರ್ತವ್ಯ ಲೋಪ ಎಸಗಿದ ಆರೋಪದ ಮೇಲೆ ಕುಂದಾಪುರ ಉಪ ವಿಭಾಗದ ಉಪ ವಿಭಾಗಾಧಿಕಾರಿ ಮಹೇಶ್ ಚಂದ್ರ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸರ್ಕಾರಿ ಸೇವೆಯಿಂದ ಅಮಾನತುಗೊಳಿಸಿ ಜಿಲ್ಲಾಧಿಕಾರಿ ಕೆ. ವಿದ್ಯಾಕುಮಾರಿ ಆದೇಶಿಸಿದ್ದಾರೆ.
ಬ್ರಹ್ಮಾವರ ತಹಶೀಲ್ದಾರ್ ಶ್ರೀಕಾಂತ್ ಎಸ್. ಹೆಗಡೆಯವರಿಗೆ ಉಪ ವಿಭಾಗಾಧಿಕಾರಿ ಹುದ್ದೆಯ ಪ್ರಭಾರ ವಹಿಸಲಾಗಿದೆ.
ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿದ್ದಾಗ ಮಹೇಶ್ ಚಂದ್ರ ಅವರು ಬಡಾನಿಡಿಯೂರು ಗ್ರಾಮದಲ್ಲಿ ವಾಣಿಜ್ಯ ಉದ್ದೇಶದ ರೆಸಾರ್ಟ್ ನಿರ್ಮಾಣ ವಿಚಾರದಲ್ಲಿ ಉದ್ಯಾನ ಮತ್ತು ಬಯಲು ಜಾಗದ ವಲಯದಿಂದ ವಾಣಿಜ್ಯ ವಲಯಕ್ಕೆ ಭೂ ಉಪಯೋಗ ಬದಲಾವಣೆಯ ಕಡತದಲ್ಲಿ ಸರ್ವೇ ನಕ್ಷೆ ಸೇವೆ ವಿವಿಧ ದಾಖಲೆಗಳನ್ನು ನಿಯಮ ಮೀರಿ ನಕಲಿಯಾಗಿ ಸೃಷ್ಟಿಸಿದ್ದು, ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಜರುಗಿಸುವಂತೆ ಉಡುಪಿ ಶಾಸಕರು ಮನವಿ ಮಾಡಿದ್ದರು.
ಈ ಬಗ್ಗೆ ಕಾರಣ ಕೇಳಿ ಮಹೇಶ್ ಚಂದ್ರ ಅವರಿಗೆ ನೋಟಿಸ್ ನೀಡಲಾಗಿತ್ತು. ತೃಪ್ತಿಕರ ಉತ್ತರ ಸಲ್ಲಿಕೆ ಮಾಡಿರಲಿಲ್ಲ ಮತ್ತು ಕರ್ತವ್ಯಲೋಪ ಮಾಡಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಅಮಾನತು ಮಾಡಲಾಗಿದೆ.