ಬಳ್ಳಾರಿ: ಬಳ್ಳಾರಿ ಜಿಲ್ಲೆ ಕುರುಗೋಡಿನಲ್ಲಿ ಕುಟುಂಬದವರಿಂದಲೇ ದೇವದಾಸಿ ಪದ್ಧತಿಗೆ ದೂಡಲಾಗುತ್ತಿದ್ದ ಯುವತಿಯನ್ನು ಪೊಲೀಸರು ರಕ್ಷಣೆ ಮಾಡಿದ್ದು, ಆಕೆ ಪ್ರೀತಿಸಿದ ಯುವಕನೊಂದಿಗೆ ಮದುವೆ ಮಾಡಿಸಿದ್ದಾರೆ.
ಯುವಕನೊಬ್ಬನನ್ನು ಪುತ್ರಿ ಪ್ರೀತಿಸುತ್ತಿರುವ ವಿಷಯ ತಿಳಿದ ಆಕೆಯ ತಾಯಿ ವಿರೋಧಿಸಿದ್ದಾರೆ. ದೇವದಾಸಿ ಆಗುವಂತೆ ಒತ್ತಾಯಿಸಿದ್ದಾರೆ. ಇದಕ್ಕೆ ಯುವತಿ ಒಪ್ಪಿಲ್ಲ. ಪುನರ್ವಸತಿ ಕಲ್ಪಿತ ದೇವದಾಸಿಗರ ವಿಮೋಚನಾ ಸಂಘದ ತಾಲೂಕು ಅಧ್ಯಕ್ಷ ಅವರನ್ನು ಸಂಪರ್ಕಿಸಿ ಮಾಹಿತಿ ನೀಡಿದ್ದಾರೆ. ಬಳಿಕ ಅವರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.
ಕುರುಗೋಡು ಪೊಲೀಸ್ ಠಾಣೆಯ ಪಿಎಸ್ಐ ಸುಪ್ರೀತ್ ವಿರೂಪಾಕ್ಷಪ್ಪ ಅವರು ಯುವತಿ ಮತ್ತು ಯುವಕನ ಕುಟುಂಬದವರನ್ನು ಠಾಣೆಗೆ ಕರೆಸಿ ದೇವದಾಸಿ ಪದ್ಧತಿಯ ದುಷ್ಪರಿಣಾಮಗಳ ಬಗ್ಗೆ ತಿಳಿವಳಿಕೆ ನೀಡಿದ್ದು, ಅವರ ಮದುವೆಗೆ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಂತರ ಎಲ್ಲರ ಸಮ್ಮುಖದಲ್ಲಿ ದೊಡ್ಡಬಸವೇಶ್ವರ ದೇವಾಲಯದಲ್ಲಿ ಶುಕ್ರವಾರ ಮದುವೆ ಮಾಡಿಸಲಾಗಿದೆ.