ಬೆಂಗಳೂರು : ಬೆಂಗಳೂರಲ್ಲಿ ಕಸದ ಸಮಸ್ಯೆಗೆ ಮುಕ್ತಿ ಹಾಡಬೇಕೆಂದು ಗ್ರೇಟರ್ ಬೆಂಗಳೂರು ಭಾರಿ ಕಸರತ್ತು ಮಾಡುತ್ತಿದೆ. ಆದರೆ ಯುವತಿಯೋರ್ವಳು ರಸ್ತೆ ಬದಿ ಕಸ ಎಸೆದು ಡ್ಯಾನ್ಸ್ ಮಾಡಿದ್ದಾಳೆ.
ರಸ್ತೆಗೆ ಕಸ ಎಸೆದು ಯುವತಿ ಡ್ಯಾನ್ಸ್ ಮಾಡುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇದನ್ನು ಗಮನಿಸಿದ ಗ್ರೇಟರ್ ಬೆಂಗಳೂರು ಅಧಿಕಾರಿಗಳು 1000 ದಂಡ ವಿಧಿಸಿದ್ದಾರೆ.
ಮನೆ ಬಾಗಿಲಿಗೆ ಬರುತ್ತೆ ಕಸ
ಖಾಲಿ ಜಾಗಗಳಲ್ಲಿ, ರಸ್ತೆಬದಿ ಎಲ್ಲೆಂದರಲ್ಲಿ ಕಸ ಹಾಕುವವರಿಗೆ ಬುದ್ಧಿ ಕಲಿಸಲು ಮುಂದಾಗಿರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧಿಕಾರಿಗಳು, ಸಿಬ್ಬಂದಿಗಳು ಕಸ ಸುರಿದವರ ಮನೆ ಮುಂದೆಯೇ ವಾಹನಗಟ್ಟಲೇ ಕಸ ಸುರಿದು ದಂಡ ವಿಧಿಸುತ್ತಿದ್ದಾರೆ.
ಕಸದ ವಾಹನದ ಸಮೇತ ಸ್ಥಳಕ್ಕಾಗಮಿಸಿದ ಜಿಬಿಎ ಅಧಿಕಾರಿಗಳು, ಸಿಬ್ಬಂದಿಗಳು ರಸ್ತೆಬದಿ ಎಸೆದಿದ್ದ ಕಸಗಳನ್ನೆಲ್ಲ ಎತ್ತಿಕೊಂಡು ಹೋಗಿ ಕಸ ಸುರಿದವರ ಮನೆ ಮುಂದೆಯೇ ಸುರಿದು ಬುದ್ಧಿ ಕಲಿಸಿದ್ದಾರೆ. ಅಲ್ಲದೇ ಮನೆಯವರಿಗೆ 100 ರೂಪಾಯಿ ದಂಡ ವಿಧಿಸಿದ್ದಾರೆ.
ಕಸದ ವಾಹನಗಳು ಪ್ರತಿ ದಿನ ಮನೆ ಬಳಿ ಬಂದು ವಿಸಿಲ್ ಹಾಕಿ ಕಾಯುತ್ತಾರೆ. ಮುಂಜಾನೆ 8 ಗಂಟೆಯೊಳಗೆ ಕಸದ ವಾಹನಗಳು ಬಂದರೂ ನಿವಾಸಿಗಳು ಕಸ ನೀಡದೇ ಮನೆ ಬಳಿ, ರಸ್ತೆ ಬಳಿ ಕಸ ಎಸೆದು ಹೋಗುತ್ತಿದ್ದಾರೆ. ಇಂತಹ ಜನರಿಗೆ ತಕ್ಕ ಪಾಠಕಲಿಸಲು ಡಿಸಿಎಂ ಡಿ.ಕೆ.ಶಿವಕುಮಾರ್ ಸೂಚಿಸಿದ್ದಾರೆ. ಹಾಗಾಗಿ ಜಿಬಿಎ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿದ್ದು, ಎಲ್ಲೆಲ್ಲಿ ಯಾರು ಕಸ ಸುರಿಯುತ್ತಾರೋ ಅಂತವರ ಮನೆ ಮುಂದೆ ಕಸ ಸುರಿದು, ದಂಡ ವಿಧಿಸುತ್ತೇವೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.
