ದಾವಣಗೆರೆ: ಆನ್ ಲೈನ್ ಗೇಮ್ ಚಟಕ್ಕೆ ಬಿದ್ದು ಹಣ ಕಳೆದುಕೊಂಡ ಖಿನ್ನತೆ ಒಳಗಾಗಿ ಯುವಕ ಸೆಲ್ಫಿ ವಿಡಿಯೋ ಮಾಡಿಟ್ಟು ಆತ್ಮಹತ್ಯೆಗೆ ಮಾಡಿಕೊಂಡ ಘಟನೆ ದಾವಣಗೆರೆಯಲ್ಲಿ ನಡೆದಿದೆ.
ಆತ್ಮಹತ್ಯೆಗೆ ಮಾಡಿಕೊಂಡ ಯುವಕನನ್ನು ಶಶಿಕುಮಾರ್ (25) ಎಂದು ಗುರುತಿಸಲಾಗಿದೆ. ದಾವಣಗೆರೆ ಜಿಲ್ಲೆಯ ಸರಸ್ವತಿ ನಗರದ ನಿವಾಸಿಯಾಗಿದ್ದ ಯುವಕ ಶಶಿಕುಮಾರ್ ಆನ್ ಲೈನ್ ಗೇಮ್ ಚಟಕ್ಕೆ ಬಿದ್ದು ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾನೆ.
ಆನ್ ಲೈನ್ ಗೇಮ್ ನಲ್ಲಿ 10 ಲಕ್ಷ ಹಣ ಕಳೆದುಕೊಂಡಿದ್ದೇನೆ. ಅಲ್ಲದೇ 19 ಕೋಟಿಗೂ ಅಧಿಕ ಹಣ ಗೆದ್ದಿದ್ದೇನೆ. ಆದರೆ ಆನ್ ಲೈನ್ ಗೇಮ್ ನಡೆಸುವವರು ನನಗೆ ಹಣ ಕೊಡದೇ ಮೋಸ ಮಾಡಿದ್ದಾರೆ. ಈ ಬಗ್ಗೆ ವಿದ್ಯಾನಗರ ಪೊಲೀಸ್ ಠಾಣೆಗೆ ಕೂಡ ದೂರು ನೀಡಿದ್ದೇನೆ. ಆದರೆ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ಖಿನ್ನತೆಗೆ ಒಳಗಾಗಿದ್ದೇನೆ ಎಂದು ಶಶಿಕುಮಾರ್ ಡೆತ್ ನೋಟ್ ಬರೆದಿಟ್ಟಿದ್ದಾನೆ. ಆನ್ ಲೈನ್ ಗೇಮಿಂಗ್ ವಿರುದ್ಧ ಪೊಲೀಸರು ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಡೆತ್ ನೋಟ್ ಬರೆದಿಟ್ಟಿದ್ದಾನೆ.
ಈತ ಪ್ರಧಾನಮಂತ್ರಿ, ಮುಖ್ಯಮಂತ್ರಿ, ಜಿಲ್ಲಾಧಿಕಾರಿಗಳು, ಎಸ್ ಪಿಗಳಿಗೂ ಪತ್ರ ಬರೆದು ಆನ್ ಲೈನ್ ಗೇಮ್ ಗಳನ್ನು ನಿಷೇಧಿಸುವಂತೆ ಮನವಿ ಮಾಡಿದ್ದ. ಅಲ್ಲದೇ ವಂಚಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದ. ಆದರೂ ಯಾವುದೇ ಕ್ರಮ ಕೈಗೊಂಡಿಲ್ಲದ ಹಿನ್ನೆಲೆಯಲ್ಲಿ ಯುವಕ ವಿಡಿಯೋ ಮಾಡಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಆತ್ಮಹತ್ಯೆಗೂ ಮೊದಲು ಸೆಲ್ಫಿ ವಿಡಿಯೋ ಮಾಡಿಟ್ಟಿರುವ ಯುವಕ ಬಳಿಕ ಸಾವಿಗೆ ಶರಣಾಗಿದ್ದಾನೆ.