ಉಡುಪಿ: ದೇವಾಲಯದ ಬೀಗ ಮುರಿದು ಕಳವಿಗೆ ಯತ್ನಿಸಿದ ಇಬ್ಬರು ಸಿಕ್ಕಿ ಬಿದ್ದಿದ್ದಾರೆ. ಕಳ್ಳತನಕ್ಕೆ ಬಂದವನೊಬ್ಬ ಮೂರ್ಛೆ ಹೋಗಿದ್ದು, ಆತನನ್ನು ಮತ್ತೊಬ್ಬ ಉಪಚರಿಸುವಾಗ ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಉಡುಪಿಯ ಕಡಿಯಾಳಿ ಮಹಿಷಮರ್ಧಿನಿ ದೇವಾಲಯದ ಬೀಗ ಮುರಿದು ಒಳನುಗ್ಗಿದ ಇಬ್ಬರು ಕಳ್ಳರು ಕಾವಲುಗಾರ ಕೂಗಿದ್ದರಿಂದ ಪರಾರಿಯಾಗಿದ್ದಾರೆ.
ಕೇರಳದ ಕಿರಣ ಜೆ.ಜೆ.(32), ವಿಷ್ಣು(34) ಬಂಧಿತ ಆರೋಪಿಗಳು. ಶುಕ್ರವಾರ ಬೆಳಗಿನ ಜಾವ ಮೂರು ಗಂಟೆಗೆ ದೇವಸ್ಥಾನಕ್ಕೆ ಹೋಗಿದ್ದಾಗ ಕಾವಲುಗಾರ ಅವರನ್ನು ತಡೆಯಲು ಯತ್ನಿಸಿದ್ದಾನೆ. ಚಾಕು ತೋರಿಸಿ ಇಬ್ಬರು ಪರಾರಿಯಾಗಿದ್ದಾರೆ. ಈ ವೇಳೆ ವಿಷ್ಣು ಸ್ವಲ್ಪ ದೂರದಲ್ಲಿ ಓಡಿ ಹೋಗಿ ಮೂರ್ಛೆ ಬಿದ್ದಿದ್ದಾನೆ. ಮತ್ತೊಬ್ಬ ಕಳ್ಳ ಕಿರಣ ಆತನನ್ನು ಉಪಚರಿಸುತ್ತಿದ್ದಾಗ ಕಾವಲುಗಾರನ ಕೂಗಾಟ ಕೇಳಿ ಓಡಿ ಬಂದ ಸ್ಥಳೀಯರು ಇಬ್ಬರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಮೂರ್ಛೆ ರೋಗದಿಂದ ಬಿದ್ದಿದ್ದ ವಿಷ್ಣುಗೆ ಕಬ್ಬಿಣದ ಸಲಕರಣೆ ನೀಡಿ ಪ್ರಾಥಮಿಕ ಚಿಕಿತ್ಸೆ ನೀಡಿದ್ದು, ಅನಾರೋಗ್ಯಕ್ಕೆ ಒಳಗಾಗಿದ್ದ ಕಳ್ಳನನ್ನು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ತೋರಿಸಿದ್ದಾರೆ. ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.