ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ ವಿವಿಧ ಕಡೆ ಸಿಡಿಲು ಬಡಿದು ನಾಲ್ವರು ಸಾವನ್ನಪ್ಪಿದ್ದಾರೆ. ಇದೇ ವೇಳೆ 21 ಕುರಿಗಳು ಸಿಡಿಲಿನ ಆಘಾತಕ್ಕೆ ಮೃತಪಟ್ಟಿವೆ.
ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಕೆ. ಚಂದರಗಿ ಗ್ರಾಮದ ಹೊಲದಲ್ಲಿ ಕುರಿಗಳನ್ನು ಮೇಯಿಸುತ್ತಿದ್ದ ವೇಳೆ ಸಿಡಿಲು ಬಡಿದು ಕುರಿಗಾಹಿ ನಿಂಗನಗೌಡ ಪಾಟೀಲ(35) ಮೃತಪಟ್ಟಿದ್ದಾರೆ.
ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ಮೂಕಬಸರಿಕಟ್ಟಿ ಗ್ರಾಮದ ಸಮೀಪ ಕುರಿ ಮೇಯಿಸುತ್ತಿದ್ದ ವೇಳೆ ಹುಲಿಕಟ್ಟಿ ಗ್ರಾಮದ ಮಾಳಪ್ಪ ಸೋಮಪ್ಪ ಗಡ್ಡೆ(40) ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ. ಈ ವೇಳೆ ಅವರೊಂದಿಗೆ ಇದ್ದ ಪುತ್ರ ಆಕಾಶ್(19) ಸಿಡಿಲಾಘಾತಕ್ಕೊಳಗಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ವಿಜಯಪುರ ಜಿಲ್ಲೆ ದೇವರಹಿಪ್ಪರಗಿ ತಾಲೂಕಿನ ಅಲಗೂರಿನಲ್ಲಿ ಕುರಿ ಮೇಯಿಸುತ್ತಿದ್ದ ವೇಳೆ ಸಿಡಿಲು ಬಡಿದು ಆಕಾಶ ಹಯ್ಯಾಳಪ್ಪ ಯಂಕಂಚಿ(17) ಮೃತಪಟ್ಟಿದ್ದಾರೆ.
ಗದಗ ಜಿಲ್ಲೆ ರೋಣ ತಾಲೂಕಿನ ಸವಡಿ ಗ್ರಾಮದಲ್ಲಿ ಸಿಡಿಲು ಬಡಿದು ಕೋಟೇಶ ಭೀಮಪ್ಪ ನರೇಗಲ್(24) ಸಾವನ್ನಪ್ಪಿದ್ದಾರೆ.