ಡಿಜಿಟಲ್ ಡೆಸ್ಕ್ : ರಾಜ್ಯದಲ್ಲಿ ಘೋರ ದುರಂತ ಸಂಭವಿಸಿದ್ದು, ಪ್ರತ್ಯೇಕ ಘಟನೆಯಲ್ಲಿ ಒಂದೇ ದಿನ 6 ಮಂದಿ ಜಲಸಮಾಧಿಯಾಗಿದ್ದಾರೆ.
ಕೃಷಿಹೊಂಡದಲ್ಲಿ ಬಿದ್ದು ಇಬ್ಬರು ಸಹೋದರಿಯರು ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ತುಮಕೂರಿನಲ್ಲಿ ನಡೆದಿದೆ.ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಹರ್ಷಪುರ ಗ್ರಾಮದಲ್ಲಿ ಈ ದುರಂತ ಸಂಭವಿಸಿದೆ. ಗಂಗಮ್ಮ (37) ಹಾಗೂ ಶಕುಂತಲಾ (36) ಮೃತ ದುರ್ದೈವಿಗಳು. ದನ ಮೇಯಿಸಲು ಹೋಗಿದ್ದ ವೇಳೆ ಈ ಘಟನೆ ನಡೆದಿದೆ.ಕೃಷಿಹೊಂಡಕ್ಕೆ ಬಿದ್ದ ಓರ್ವರನ್ನು ರಕ್ಷಿಸಲು ಹೋಗಿ ಇಬ್ಬರೂ ಹೊಂಡದಲ್ಲಿ ಮುಳುಗಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.
ರಾಯಚೂರು: ನಾಲೆಯಲ್ಲಿ ಈಜಲು ಹೋಗಿದ್ದ ಇಬ್ಬರು ನೀರುಪಾಲಾಗಿರುವ ಘಟನೆ ರಾಯಚೂರು ಜಿಲ್ಲೆಯ ಮಸ್ಕಿಯಲ್ಲಿ ನಡೆದಿದೆ.ಇಲ್ಲಿನ ಸಿರಿವಾರ ಬಳಿ ಈ ಘಟನೆ ನಡೆದಿದೆ. ವೆಂಕಟೇಶ್ (28) ಹಾಗೂ ಯಲ್ಲಾಲಿಂಗ (28) ಮೃತ ದುರ್ದೈವಿಗಳು. ಯಲ್ಲಾಲಿಂಗನ ರಕ್ಷಣೆಗೆ ಹೋಗಿ ವೆಂಕಟೇಶ್ ಕೂಡ ಪ್ರಾಣ ಕಳೆದುಕೊಂಡಿದ್ದಾನೆ.
ಕಾಂತಾರಾ ಸಿನಿಮಾ ನೋಡಲೆಂದು ಮುದಗಲ್ ನಿಂದ ಮಸ್ಕಿಗೆ ತೆರಳಿದ್ದರು. ಆದರೆ ಮಧ್ಯಾಹ್ನದ ಶೋಗೆ ಟಿಕೆಟ್ ಸಿಕ್ಕಿರಲಿಲ್ಲ. ಸಂಜೆಯ ಶೋಗೆ ಟಿಕೆಟ್ ಸಿಕ್ಕಿತ್ತು. ಅಲ್ಲಿಯವರೆಗೆ ನಾಲೆಯ ನೀರಿನಲ್ಲಿ ಈಜಲೆಂದು ಹೋಗಿದ್ದಾರೆ. ಈ ವೇಳೆ ದುರಂತ ಸಂಭವಿಸಿದೆ. ನಾಲೆಯ ನೀರಿನ ಸೆಳೆತಕೆ ಇಬ್ಬರೂ ಕೊಚ್ಚಿ ಹೋಗಿ ಸಾವನ್ನಪ್ಪಿದ್ದಾರೆ.
ಬಾಗಲಕೋಟೆ ಜಿಲ್ಲೆ ತಿಮ್ಮಾಪುರದ ಚಿಚಖಂಡಿ ಬಿ.ಕೆ ಗ್ರಾಮದ ಬಳಿ ಘಟಪ್ರಭಾ ನದಿಗೆ ಸ್ನಾನಕ್ಕೆಂದು ಹೋಗಿದ್ದ ಸಚಿನ್ ಮಾದರ್ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಕೊಡಗು ಜಿಲ್ಲೆಯ ಹುದುಗೂರು ಗ್ರಾಮದ ಯುವಕ ಸಂತೋಷ್ ಎಂಬಾತ ಹಾರಂಗಿ ನಾಲೆಯಲ್ಲಿ ಈಜಲು ಹೋಗಿ ಮೃತಪಟ್ಟಿದ್ದಾನೆ.