ದೆಹಲಿಯ ತಮ್ಮ ಮನೆಯಲ್ಲಿ ಒಬ್ಬ ವ್ಯಕ್ತಿ ತನ್ನ ಹೆಂಡತಿಯನ್ನು ಕೊಂದು, ನಂತರ ಪೊಲೀಸರಿಗೆ ಕರೆ ಮಾಡಿ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಿಕೊಂಡಿದ್ದಾನೆ.
ನಗರದ ಕೇಶವ್ ಪುರಂನಿಂದ ಈ ಘಟನೆ ವರದಿಯಾಗಿದೆ. ದಿನೇಶ್ ಶರ್ಮಾ ಎಂಬ ವ್ಯಕ್ತಿ ತನ್ನ ಪತ್ನಿ ಸುಷ್ಮಾ ಶರ್ಮಾಳನ್ನು ಕತ್ತು ಹಿಸುಕಿ ಕೊಂದು, ನಂತರ ಆಕೆಯು ತನ್ನ ಕೋಣೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಆರೋಪಿ ಪತಿಯನ್ನು ಬಂಧಿಸಲಾಗಿದೆ.
ಪೊಲೀಸರು ಮನೆಗೆ ತಲುಪಿದಾಗ, 40 ವರ್ಷದ ಮಹಿಳೆಯ ಶವ ನೆಲದ ಮೇಲೆ ಪತ್ತೆಯಾಗಿದ್ದು, ದಂಪತಿಯ 11 ವರ್ಷದ ಮಗಳು ಕೂಡ ಅದೇ ಕೋಣೆಯಲ್ಲಿದ್ದಳು. ಮಗು ಹಾಸಿಗೆಯ ಮೇಲೆ ಮಲಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ವಿಚಾರಣೆ ನಡೆಸಿದಾಗ, ಆ ವ್ಯಕ್ತಿ ತನ್ನ ಹೆಂಡತಿಯನ್ನು ದಿಂಬಿನಿಂದ ಉಸಿರುಗಟ್ಟಿಸಿ ಕೊಂದಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾನೆ.
ಆರೋಪಿ ಪತಿ ದೇವಸ್ಥಾನದಲ್ಲಿ ಅರ್ಚಕನಾಗಿ ಕೆಲಸ ಮಾಡುತ್ತಿದ್ದನು. ಪೊಲೀಸರು ಮಹಿಳೆಯ ಶವವನ್ನು ವಶಪಡಿಸಿಕೊಂಡು ಮರಣೋತ್ತರ ಪರೀಕ್ಷೆಗಾಗಿ ಬಾಬು ಜಗಜೀವನ್ ರಾಮ್ ಆಸ್ಪತ್ರೆಗೆ ಕಳುಹಿಸಿದ್ದಾರೆ.ಆರೋಪಿ ಪತಿಗೆ ವಿವಾಹೇತರ ಸಂಬಂಧವಿತ್ತು ಎಂದು ಮಹಿಳೆ ಕುಟುಂಬವು ಆರೋಪಿಸಿದೆ ಮತ್ತು ಅದು ಕೊಲೆಗೆ ಕಾರಣ ಎಂದು ಹೇಳಿದೆ.
