ಬೆಂಗಳೂರು: ದೇಶದ ಪ್ರಥಮ ಪ್ರತ್ಯೇಕ ಸೈಬರ್ ತನಿಖಾ ಘಟಕ ರಾಜ್ಯದಲ್ಲಿ ಶುರುವಾಗಲಿದೆ. ಸೈಬರ್ ಅಪರಾಧ ಕೃತ್ಯಗಳಿಗೆ ಕಡಿವಾಣ ಹಾಕುವ, ಅಂತಹ ಪ್ರಕರಣಗಳ ತನಿಖೆಯ ಸಲುವಾಗಿ ಪ್ರತ್ಯೇಕವಾಗಿ ಸ್ಥಾಪಿಸಲಾದ ಸೈಬರ್ ತನಿಖಾ ಘಟಕಕ್ಕೆ ರಾಜ್ಯ ಸರ್ಕಾರ ಚಾಲನೆ ನೀಡಿದೆ.
ಭೂಷಣ್ ಬೊರೆಸೆ ಅವರನ್ನು ಈ ಘಟಕದ ಡಿಐಜಿಯಾಗಿ ನೇಮಕ ಮಾಡಲಾಗಿದೆ. ಹಂತ ಹಂತವಾಗಿ ಡಿಜಿಪಿ, ಎಸ್ಪಿ ಸೇರಿದಂತೆ ಅಧಿಕಾರಿ ಸಿಬ್ಬಂದಿಗಳನ್ನು ನಿಯೋಜಿಸಲು ಸರ್ಕಾರ ಮುಂದಾಗಿದೆ. ಘಟಕದ ಮುಖ್ಯಸ್ಥರಾಗಿ ಪ್ರಣವ್ ಮೊಹಾಂತಿ ಅವರಿಗೆ ಹೊಣೆಗಾರಿಕೆ ನೀಡಲಾಗಿದೆ. ಈ ಬಗ್ಗೆ ಅಧಿಕೃತ ಆದೇಶ ಹೊರ ಬೀಳಬೇಕಿದೆ.
ಸೈಬರ್ ಅಪರಾಧ ಕೃತ್ಯಗಳು ಹೆಚ್ಚಾದ ಹಿನ್ನೆಲೆಯಲ್ಲಿ ಇವುಗಳ ತನಿಖೆಗೆ ಪ್ರತ್ಯೇಕ ಘಟಕ ಸ್ಥಾಪಿಸುವಂತೆ ರಾಜ್ಯ ಸರ್ಕಾರಕ್ಕೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಅಲೋಕ್ ಮೋಹನ್ ಪ್ರಸ್ತಾವನೆ ಸಲ್ಲಿಸಿದ್ದರು. ಇದಕ್ಕೆ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಸೈಬರ್ ತನಿಖಾ ಘಟಕ ಸ್ಥಾಪನೆಗೆ 72 ಕೋಟಿ ಅನುದಾನ ನೀಡುವಂತೆ ಸರ್ಕಾರಕ್ಕೆ ಪೊಲೀಸ್ ಇಲಾಖೆ ಪ್ರಸ್ತಾವನೆ ಸಲ್ಲಿಸಿದೆ. ಮೊದಲ ಹಂತದಲ್ಲಿ 5 ಕೋಟಿ ಬಿಡುಗಡೆ ಮಾಡಲಾಗಿದೆ.