ಟಿಕ್ಟಾಕ್ನಲ್ಲಿ ಲೈವ್ಸ್ಟ್ರೀಮಿಂಗ್ ಮಾಡುತ್ತಿದ್ದಾಗ ಮೆಕ್ಸಿಕನ್ ಯುವತಿಯೊಬ್ಬರಿಗೆ ಪಾಪಿ ಗುಂಡು ಹಾರಿಸಿ ಕೊಲೆ ಮಾಡಿದ ಘಟನೆ ನಡೆದಿದೆ. ಘಟನೆಯ ಆಘಾತಕಾರಿ ವೀಡಿಯೋ ವೈರಲ್ ಆಗಿದೆ.
23 ವರ್ಷದ ವಲೇರಿಯಾ ಮಾರ್ಕ್ವೆಜ್, ಟಿಕ್ಟಾಕ್ ಮತ್ತು ಇನ್ಸ್ಟಾಗ್ರಾಮ್ನಲ್ಲಿ ಸುಮಾರು 200,000 ಅನುಯಾಯಿಗಳೊಂದಿಗೆ ಆನ್ಲೈನ್ನಲ್ಲಿ ಜನಪ್ರಿಯತೆ ಗಳಿಸಿದ್ದರು. ಮಾರ್ಕ್ವೆಜ್ ತಮ್ಮ ಬ್ಯೂಟಿ ಸಲೂನ್, ಬ್ಲಾಸಮ್ ದಿ ಬ್ಯೂಟಿ ಲೌಂಜ್ನಿಂದ ತಮ್ಮನ್ನು ತಾವು ಚಿತ್ರೀಕರಿಸಿಕೊಳ್ಳುತ್ತಿದ್ದಾಗ ಈ ಮಾರಕ ಘಟನೆ ಸಂಭವಿಸಿದೆ.
ಅವರು ಕ್ಯಾಮೆರಾ ಮುಂದೆ ತಮ್ಮ ವೀಕ್ಷಕರೊಂದಿಗೆ ಮಾತನಾಡಲು ಅಥವಾ ಅವರಿಗೆ “ಹಾಯ್” ಎಂದು ಹೇಳಲು ಪ್ರಾರಂಭಿಸುತ್ತಿದ್ದಂತೆ ಅವರ ಮೇಲೆ ಮೂರು ಗುಂಡು ಹಾರಿಸಲಾಗುತ್ತದೆ, ಪರಿಣಾಮ ಸ್ಥಳದಲ್ಲೇ ಯುವತಿ ಸಾವನ್ನಪ್ಪುತ್ತಾಳೆ. ಅತಿಯಾಗಿ ಸುಂದರವಾಗಿದ್ದೀಯ ಎಂದು ಯುವತಿಯನ್ನು ಈತ ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ. ಈ ಹಿಂದೆ ಹಲವು ಬಾರಿ ಯುವತಿಯ ಮೇಲೆ ಕೊಲೆ ಯತ್ನ ನಡೆದಿತ್ತು ಎನ್ನಲಾಗಿದೆ.
ವರದಿಗಳ ಪ್ರಕಾರ ಆಕೆಯ ಎದೆ ಮತ್ತು ತಲೆಗೆ ಗುಂಡು ತಗುಲಿದ್ದು, ಸ್ಥಳದಲ್ಲೇ ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಗಿದೆ. ದಿ ನ್ಯೂಯಾರ್ಕ್ ಪೋಸ್ಟ್ ಇದನ್ನು ದೃಢಪಡಿಸಿದ್ದು, ಉಡುಗೊರೆಯನ್ನು ನೀಡುವಂತೆ ನಟಿಸುತ್ತಾ ಮೋಟಾರ್ ಬೈಕ್ ಸವಾರಿ ಮಾಡುತ್ತಿದ್ದ ಬಂದೂಕುಧಾರಿಯೊಬ್ಬರು ಆಕೆಯನ್ನು ಕೊಲೆ ಮಾಡಿದ್ದಾರೆ ಎಂದು ಪೊಲೀಸ್ ಮೂಲಗಳನ್ನು ಉಲ್ಲೇಖಿಸಿದೆ. ತನಿಖೆ ನಡೆಯುತ್ತಿದೆ ಮತ್ತು ಪೊಲೀಸರು ಬಂದೂಕುಧಾರಿಯನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದಾರೆ.