HomeKarnatakaಕುರಿಗಾಹಿಗಳಿಗೆ ಸಿಎಂ ಗುಡ್ ನ್ಯೂಸ್: ಗನ್ ಲೈಸೆನ್ಸ್, ಉಚಿತ ಚಿಕಿತ್ಸೆ, ಮಕ್ಕಳಿಗೆ ಶಿಕ್ಷಣ ಸೇರಿ ಹಲವು...

ಕುರಿಗಾಹಿಗಳಿಗೆ ಸಿಎಂ ಗುಡ್ ನ್ಯೂಸ್: ಗನ್ ಲೈಸೆನ್ಸ್, ಉಚಿತ ಚಿಕಿತ್ಸೆ, ಮಕ್ಕಳಿಗೆ ಶಿಕ್ಷಣ ಸೇರಿ ಹಲವು ಸೌಲಭ್ಯ

ಬೆಂಗಳೂರು: ಕುರಿಗಾಹಿಗಳ ರಕ್ಷಣೆಗೆ ನಮ್ಮ ಸರ್ಕಾರ ಬದ್ಧವಾಗಿದೆ. ಕುರಿಗಳ ಕಳ್ಳತನ ತಡೆಯಲು ಅಗತ್ಯವಿದ್ದರಿಗೆ ಬಂದೂಕಿನ ಲೈಸೆನ್ಸ್ ಕೊಡಿಸಲು ಸೂಚಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ತಿಳಿಸಿದ್ದಾರೆ.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಸಂಚಾರಿ ಕುರಿಗಾಹಿ ಸಮುದಾಯಗಳ ಮುಖಂಡರ ಜೊತೆಗಿನ ಸಭೆಯ ಬಳಿಕ ಮಾಹಿತಿ ನೀಡಿದ್ದಾರೆ.

ಕುರಿ ಕಳ್ಳತನ ಪ್ರಕರಣಗಳ ಕುರಿತು ಯಾವುದೇ ಠಾಣೆಗೆ ದೂರು ಬಂದ ಕೂಡಲೇ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕು ಎಂಬ ಸೂಚನೆ ನೀಡಲಾಯಿತು. ರಾಜ್ಯದಲ್ಲಿನ ವಲಸೆ ಕುರಿಗಾರರ ಮತ್ತು ಅವರ ಸ್ವತ್ತುಗಳ ಮೇಲಿನ ದೌರ್ಜನ್ಯ ತಡೆಯುವ ಕಾಯ್ದೆ ರೂಪಿಸಲಾಗುವುದು. ಕುರಿಗಾಹಿಗಳಿಗೆ ಗುರುತಿನ ಚೀಟಿ ವಿತರಣೆ ನೀಡಲು ವ್ಯವಸ್ಥೆ ಮಾಡಲಾಗುವುದು. ಈ ಗುರುತಿನ ಚೀಟಿ ಆಧಾರದ ಮೇಲೆ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ನೀಡುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕುರಿಗಾಹಿಗಳ ಮಕ್ಕಳಿಗೆ ಸರ್ಕಾರಿ ವಸತಿ ಶಾಲೆಗಳಲ್ಲಿ ಆದ್ಯತೆ ಮೇರೆಗೆ ಪ್ರವೇಶ ನೀಡುವ ಬಗ್ಗೆ ಬಜೆಟ್ ನಲ್ಲಿ ಘೋಷಣೆ ಮಾಡಿದ್ದು, ಇವುಗಳಿಗೆ ಸರ್ಕಾರಿ ಆದೇಶ ನೀಡುವಂತೆ ಸೂಚಿಸಲಾಯಿತು. ಪಶುಸಂಗೋಪನಾ ಇಲಾಖೆಯಲ್ಲಿ 1300 ವೈದ್ಯರ ಹುದ್ದೆ ಖಾಲಿ ಇದ್ದು, ಪ್ರಸ್ತುತ 400 ವೈದ್ಯರನ್ನು ನೇಮಕ ಮಾಡಲಾಗುತ್ತಿದೆ. ಮುಂದಿನ ವರ್ಷ ಬಾಕಿ ವೈದ್ಯರ ನೇಮಕಾತಿ ಮಾಡಲಾಗುವುದು. ಕುರಿಗಾರರು ಕ್ಯಾಂಪ್ ಮಾಡಿರುವ ಕಡೆಗಳಲ್ಲೇ ವೈದ್ಯರು ಬಂದು ಚಿಕಿತ್ಸೆ ನೀಡಬೇಕು ಎಂದು ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.

ಹಿಂದಿನ ಸರ್ಕಾರ ಸತ್ತ ಕುರಿಗಳಿಗೆ ಪರಿಹಾರ ನೀಡುವ ಅನುಗ್ರಹ ಯೋಜನೆಯನ್ನು ನಿಲ್ಲಿಸಿದ್ದು, ಈ ಕುರಿತು ಪರಿಹಾರ ನೀಡುವ ಬಗ್ಗೆ ಎಲ್ಲಾ ಜಿಲ್ಲೆಗಳಿಂದ ವರದಿ ತರಿಸಲಾಗುವುದು. ಅನುಗ್ರಹ ಯೋಜನೆಯಡಿ ಒಂದು ಕುರಿ ಆಕಸ್ಮಿಕವಾಗಿ ಮರಣ ಹೊಂದಿದರೆ 5 ಸಾವಿರ ರೂಪಾಯಿ ಪರಿಹಾರ ನೀಡಲಾಗುತ್ತದೆ. ಈ ಮೊತ್ತವನ್ನು ಇನ್ನಷ್ಟು ಹೆಚ್ಚಿಸುವ ಬಗ್ಗೆ ಪರಿಶೀಲನೆ ಮಾಡಲಾಗುವುದು ಎಂದರು.

ಗೋಮಾಳಗಳನ್ನು ಯಾರಿಗೂ ಪರಭಾರೆ ಮಾಡಬಾರದೆಂದು ಈ ಹಿಂದೆ ನಮ್ಮ ಸರ್ಕಾರದ ಅವಧಿಯಲ್ಲಿ ಆದೇಶ ಹೊರಡಿಸಲಾಗಿತ್ತು. ಗೋಮಾಳಗಳ ರಕ್ಷಣೆ ಮಾಡಲಾಗುವುದು. ಅರಣ್ಯ ಪ್ರದೇಶದಲ್ಲಿ ಕುರಿಗಳನ್ನು ಮಾತ್ರ ಮೇಯಿಸಲು ಅವಕಾಶ ನೀಡುವ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು. ಕುರಿಗಳ ಅಭಿವೃದ್ಧಿ, ಕುರಿಗಾಹಿಗಳ ಭದ್ರತೆ, ಕುರಿ ವ್ಯಾಪಾರಕ್ಕೆ ನೆರವು, ಮಾರುಕಟ್ಟೆ ವಿಸ್ತರಣೆಗೆ ನೆರವು ನೀಡಲಾಗುವುದು ಎಂದು ಹೇಳಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular