ದೇವದಾರಿ ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆಗೆ ರಾಜ್ಯದ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಭೂಮಿ ಹಸ್ತಾಂತರಕ್ಕೆ ತಡೆ ಹಿಡಿದಿರುವುದಕ್ಕೆ “ನನ್ನ ಮೇಲಿನ ದ್ವೇಷ ಕಾರಣ“ ಎಂದಿರುವ ಕುಮಾರಸ್ವಾಮಿಯವರೇ, ದ್ವೇಷ ಮಾಡಲು ನೀವು ಸವತಿ ಮಗನೂ ಅಲ್ಲ, ದಾಯಾದಿಯೂ ಅಲ್ಲ. ನಿಮ್ಮ ಮೇಲಿನ ದ್ವೇಷ ಕಾರಣವಲ್ಲ ಸ್ವಾಮಿ, ನಾಡಿನ ನಿಸರ್ಗದ ಮೇಲಿನ ಪ್ರೀತಿ ಕಾರಣ ಎಂದು ಹೇಳಿದೆ.
ದೇವದಾರಿ ಅರಣ್ಯ ಪ್ರದೇಶ ಅತ್ಯಮೂಲ್ಯ ನಿಸರ್ಗ ಸಂಪತ್ತನ್ನು ಹೊಂದಿದೆ, ಗಣಿಗಾರಿಕೆ ನಡೆದರೆ ಒಂದು ಲಕ್ಷಕ್ಕೂ ಹೆಚ್ಚು ಬೃಹತ್ ಮರಗಳು ನಾಶವಾಗುತ್ತವೆ, ಅಪಾರ ಪ್ರಮಾಣದ ಜೀವ ವೈವಿದ್ಯಗಳು ನಾಶವಾಗುತ್ತವೆ, ದರೋಜಿ ಕರಡಿ ಧಾಮಕ್ಕೆ ಕುತ್ತು ಬರಲಿದೆ ಎಂದು ತಿಳಿಸಿದೆ.
ನಾಡಿನ ನಿಸರ್ಗ ಸಂಪತ್ತಿನ ಮೇಲೆ ನಿಮಗೆ ಪ್ರೀತಿ ಇಲ್ಲವೇ? ಕಾಳಜಿ ಇಲ್ಲವೇ? ಕುಮಾರಸ್ವಾಮಿಯವರೇ, ನೀವು ಕೇಂದ್ರ ಮಂತ್ರಿಯಾಗಿದ್ದೀರಿ, ನಿಮ್ಮ ಮೇಲೆ ಹೊಣೆಗಾರಿಕೆ ಇದೆ, ರಾಜ್ಯದ ಹಿತಾಸಕ್ತಿ ಕಾಪಾಡುವುದನ್ನು ಬಿಟ್ಟು ಎಲ್ಲದನ್ನೂ ವೈಯಕ್ತಿಕ ನೆಲೆಗೆ ಎಳೆದುಕೊಂಡು ಹೋಗಿ ರಾಜಕೀಯ ಮಾಡುವುದು ಶೋಭೆಯಲ್ಲ ಎಂದು ಕಾಂಗ್ರೆಸ್ ತಿಳಿಸಿದೆ.
ನಾಗರೀಕತೆ ಬೆಳೆದು ಬಂದಿದ್ದೇ ನಿಸರ್ಗದ ಆಶ್ರಯದಲ್ಲಿ, ನಿಸರ್ಗವನ್ನು ಕಡೆಗಣಿಸಿ ಮನುಷ್ಯ ಬದುಕಲು ಸಾಧ್ಯವೇ ಇಲ್ಲ, “ಧರ್ಮೋ ರಕ್ಷತಿ ರಕ್ಷಿತಃ“ ಎಂಬ ಮಾತಿಗಿಂತ ”ನಿಸರ್ಗ ರಕ್ಷತಿ ರಕ್ಷಿತಃ” ಎಂಬ ಮಾತು ಮನುಷ್ಯನಿಗೆ ಹೆಚ್ಚು ಪ್ರಸ್ತುತವಾಗುತ್ತದೆ ಎಂದು ಹೇಳಲಾಗಿದೆ.
ಹೆಚ್.ಡಿ. ಕುಮಾರಸ್ವಾಮಿ ಅವರೇ, ಈ ವಿಷಯಗಳು ನಿಮ್ಮ ಗಮನದಲ್ಲಿರಲಿ. ದೇವದಾರಿ ಅರಣ್ಯದಲ್ಲಿನ ಅಪಾರ ನಿಸರ್ಗ ಸಂಪತ್ತಿನ ಹಿತಾಸಕ್ತಿಯನ್ನು ಕಡೆಗಣಿಸಿ ಯಾವ ಸಾಧನೆ ಮಾಡಲು ಹೊರಟಿದ್ದೀರಿ? ದೇಶದ ಜಿಡಿಪಿ ಬೆಳೆಯಲು ಗಣಿಗಾರಿಕೆ ಮಾಡಬೇಕು ಎನ್ನುವ ಕೇಂದ್ರ ಸಚಿವರೇ, ದೇಶದ ಜಿಡಿಪಿಗಾಗಿ ಕನ್ನಡಮ್ಮನ ಒಡಲನ್ನು ಬಗೆದು ತಿನ್ನಬೇಕೆ? ತೆರಿಗೆಯಿಂದ ಹಿಡಿದು ಗಣಿಗಾರಿಕೆಯವರೆಗೆ ಕರ್ನಾಟಕವೇ ದೇಶದ ಹೊರೆಯನ್ನು ಹೊರಬೇಕೆ? ಎಂದು ಪ್ರಶ್ನಿಸಲಾಗಿದೆ. ಕುಮಾರಸ್ವಾಮಿಯವರೇ, ಕರ್ನಾಟಕದ ಹಸಿರನ್ನು ಬರಿದು ಮಾಡಲು ನಮ್ಮ ಸರ್ಕಾರ ಎಂದಿಗೂ ಅವಕಾಶ ಮಾಡಿಕೊಡುವುದಿಲ್ಲ ಎಂದು ಕಾಂಗ್ರೆಸ್ ತಿಳಿಸಿದೆ.