ಹಾಸನ: ಜೆಡಿಎಸ್ ಶಾಸಕ ರೇವಣ್ಣ ಕುಟುಂಬಕ್ಕೆ ಆಪ್ತರಿಂದಲೇ ಕಂಟಕ ಎದುರಾದಂತಿದೆ. ಪ್ರಜ್ವಲ್ ರೇವಣ್ಣ ಪ್ರಕರಣ, ಜೈಲು ಪಾಲು, ಕಿಡ್ನ್ಯಾಪ್ ಕೇಸ್ ನಲ್ಲಿ ರೇವಣ್ಣಗೆ ಸಂಕಷ್ಟ ಎದುರಾದ ಬೆನ್ನಲ್ಲೇ ಇದೀಗ ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ರೇವಣ್ಣ ಮತ್ತೋರ್ವ ಮಗ ಸೂರಜ್ ರೇವಣ್ಣ ಜೈಲು ಸೇರಿದ್ದು, ಗೊತ್ತಿದ್ದವರಿಂದಲೇ ರೇವಣ್ಣ ಕುಟುಂಬದ ಪ್ರಕರಣಗಳು ಹೊರಬರುತ್ತಿವೆ ಎನ್ನಲಾಗಿದೆ.
ಸೂರಜ್ ರೇವಣ್ಣ ಪ್ರಕರಣ ಮೊದಲು ಹೊರಬಂದಿದ್ದು ಮಾಜಿ ಕಾರು ಚಾಲಕನಿಂದ ಎಂದು ಹೇಳಲಾಗುತ್ತಿದೆ. ಈಗ ಸೂರಜ್ ರೇವಣ್ಣ ಬಂಧನವಾಗುತ್ತಿದ್ದಂತೆ ಆತನ ಆಪ್ತ ಶಿವಕುಮಾರ್ ನಾಪತ್ತೆಯಾಗಿರುವುದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ.
ಅರಕಲಗೂಡು ಮೂಲದ ಯುವಕ ಸೂರಜ್ ರೇವಣ್ಣ ವಿರುದ್ಧ ಅಸಹಜ ಲೈಂಗಿಕ ದೌರ್ಜನ್ಯ ಆರೋಪ ಮಾಡಿ ದೂರು ನೀಡುತ್ತಿದ್ದಂತೆ ಸೂರಜ್ ಆಪ್ತ ಶಿವಕುಮಾರ್ ಸಂತ್ರಸ್ತ ಯುವಕನ ವಿರುದ್ಧವೇ ಬ್ಲ್ಯಾಕ್ ಮೇಲ್, ಬೆದರಿಕೆ, ಹಣಕ್ಕೆ ಬೇಡಿಕೆ ಇಟ್ಟ ಬಗ್ಗೆ ಪ್ರಕರಣ ದಾಖಲಿಸಿದ್ದ. ದೂರು ದಾಖಲಾದ ಬಳಿಕ ಶಿವಕುಮಾರ್ ಯಾರ ಸಂಪರ್ಕಕ್ಕೂ ಸಿಗದೇ ತಲೆಮರೆಸಿಕೊಂಡಿದ್ದಾನೆ. ಫೋನ್ ಸ್ವಿಚ್ಡ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದಾನೆ ಎನ್ನಲಾಗಿದೆ. ಈ ಬೆಳವಣಿಗೆ ಗಮನಿಸಿದರೆ ಸೂರಜ್ ಜೊತೆಯಲ್ಲಿಯೇ ಇದ್ದು ಶಿವಕುಮಾರ್ ನೇ ಬ್ಲ್ಯಾಕ್ ಮೇಲ್ ತಂತ್ರ ರೂಪಿಸಿದ್ದನೇ? ಎಂಬ ಶಂಕೆ ವ್ಯಕ್ತವಾಗಿದೆ.
ಅಲ್ಲದೇ ಪೊಲೀಸ್ ವಿಚಾರಣೆ ವೇಳೆ ಸೂರಜ್ ರೇವಣ್ಣ ಕೂಡ ಆಪ್ತನಾಗಿದ್ದ ಶಿವಕುಮಾರ್ ನೇ ತನ್ನ ಹಾಗೂ ಕುಟುಂಬದ ವಿರುದ್ಧ ಷಡ್ಯಂತ್ರ ರೂಪಿಸಿರಬಹುದು ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.