ಬೆಂಗಳೂರು: ಸಾಹಿತಿಗಳು ರಾಜಕಾರಣಿಗಳೇ, ಬಾಯಿ ಬಿಟ್ಟು ಹೇಳಿಕೊಳ್ಳುವುದಿಲ್ಲ ಅಷ್ಟೇ ಎನ್ನುವ ಮೂಲಕ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಉದ್ಧಟತನ ತೋರಿದ್ದಾರೆ. ಅವರು ಬೇಷರತ್ ಕ್ಷಮೆಯಾಚಿಸಬೇಕು ಎಂದು ನಾಡಿನ ಲೇಖಕರು ಆಗ್ರಹಿಸಿದ್ದಾರೆ.
ಜಂಟಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ ನಾಡಿನ ಲೇಖಕರು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ನಾಯಕರಿಗೆ ಇಂತಹ ಧೈರ್ಯ ಬರಲು ಓಲೈಸುವ ಮನೋಧರ್ಮದ ನಮ್ಮ ಸಾಹಿತಿಗಳು, ಬರಹಗಾರರೂ ಕಾರಣ ಎಂಬುದನ್ನು ನಾವು ಮರೆಯಬಾರದು. ಕೆಪಿಸಿಸಿ ಕಚೇರಿಯಲ್ಲಿ ಭಾಗವಹಿಸಿದ್ದ ವಿವಿಧ ಅಕಾಡೆಮಿಗಳ ಅಧ್ಯಕ್ಷರು ಮತ್ತು ಸದಸ್ಯರು ಪಕ್ಷ ರಾಜಕಾರಣಕ್ಕೆ ಹೊರತಾಗಿ ತಮ್ಮ ಜವಾಬ್ದಾರಿ ಮತ್ತು ಘನತೆಯನ್ನು ಎತ್ತಿ ಹಿಡಿಯುವಲ್ಲಿ ಪ್ರಮಾದವೆಸಗಿದ್ದಾರೆ. ಸಾಹಿತಿಗಳು ಇದನ್ನು ಖಂಡಿಸಿ ತಮ್ಮ ಸ್ವಾಯತ್ತ ಮನೋಧರ್ಮ ಸಾರುವ ಕೆಲಸ ಮಾಡಬೇಕು ಎಂದು ಲೇಖಕರು ಹೇಳಿದ್ದಾರೆ.
ಸಾಹಿತಿಗಳಾದ ರಹಮತ್ ತರೀಕೆರೆ, ನಟರಾಜ ಬೂದಾಳ್, ನಾ. ದಿವಾಕರ, ಹೆಚ್.ಎಸ್. ರಾಘವೇಂದ್ರ, ಕೆ. ಫಣಿರಾಜ್, ಡಾ.ಹೆಚ್.ಎಸ್. ಅನುಪಮಾ, ಡಾ. ಶ್ರೀನಿವಾಸ ಕಕ್ಕಿಲಾಯ, ಸುನಂದಾ ಕಡಮೆ, ವಿ.ಪಿ. ನಿರಂಜನಾರಾಧ್ಯ, ಡಿ.ಎಸ್. ಚೌಗಲೆ, ಬಸವರಾಜ ಸೂಳಿಭಾವಿ, ಬಿ. ಸುರೇಶ, ಕೇಸರಿ ಹರವು ಸೇರಿದಂತೆ ಐವತ್ತಕ್ಕೂ ಹೆಚ್ಚು ಲೇಖಕರು ಜಂಟಿ ಪತ್ರಿಕಾ ಹೇಳಿಕೆಗೆ ಸಹಿ ಹಾಕಿದ್ದಾರೆ.