ನವದೆಹಲಿ: ವೈದ್ಯಕೀಯ ಪ್ರವೇಶ ಪರೀಕ್ಷೆ ‘ನೀಟ್’ ನಲ್ಲಿ ಭಾರಿ ಅಕ್ರಮಗಳು ನಡೆದ ಬೆನ್ನಲ್ಲೇ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ(ಎನ್ಟಿಎ) ನಡೆಸಿದ್ದ ರಾಷ್ಟ್ರೀಯ ಅರ್ಹತಾ ಪರೀಕ್ಷೆ ‘ನೆಟ್’ ನಲ್ಲಿಯೂ ಅಕ್ರಮ ನಡೆದ ಆರೋಪ ಕೇಳಿ ಬಂದಿದೆ.
ಜೂನ್ 18ರಂದು ನಡೆದಿದ್ದ ನೆಟ್ ಪರೀಕ್ಷೆಯನ್ನು ಮರುದಿನವೇ ಕೇಂದ್ರ ಶಿಕ್ಷಣ ಸಚಿವಾಲಯ ರದ್ದುಗೊಳಿಸಿದ್ದು, ಅಕ್ರಮದ ಬಗ್ಗೆ ಸಿಬಿಐ ತನಿಖೆಗೆ ಆದೇಶಿಸಿದೆ. ಪದವಿ ಕಾಲೇಜು, ವಿಶ್ವವಿದ್ಯಾಲಯ ಪ್ರಾಧ್ಯಾಪಕರ ನೇಮಕಾತಿಗೆ ಅರ್ಹತೆಗಾಗಿ ಯುಜಿಸಿ ಪರವಾಗಿ ಎನ್.ಟಿ.ಎ. ನೆಟ್ ಪರೀಕ್ಷೆಗಳನ್ನು ನಡೆಸಿದೆ.
ಮಂಗಳವಾರ ದೇಶದ ವಿವಿಧ ನಗರಗಳಲ್ಲಿ 9 ಲಕ್ಷ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು. ಪರೀಕ್ಷೆಯಲ್ಲಿ ವ್ಯಾಪಕ ಅವ್ಯವಹಾರ ನಡೆದ ಹಿನ್ನೆಲೆಯಲ್ಲಿ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯದಿಂದ ಅಕ್ರಮಗಳ ಬಗ್ಗೆ ವರದಿ ಸಲ್ಲಿಕೆಯಾಗಿದೆ. ಇದರ ಬೆನ್ನಲ್ಲೇ ಪರೀಕ್ಷೆಯನ್ನು ರದ್ದುಪಡಿಸಿ ಕೇಂದ್ರ ಶಿಕ್ಷಣ ಸಚಿವಾಲಯ ಸಿಬಿಐ ತನಿಖೆಗೆ ಆದೇಶ ನೀಡಿದೆ.