ಭಾರತೀಯ ಮೂಲದ ಕೋಟ್ಯಾಧಿಪತಿ ಹಿಂದೂಜಾ ಕುಟುಂಬ ಮತ್ತೊಮ್ಮೆ ವಿವಾದಕ್ಕೆ ಸಿಲುಕಿದೆ. ಗೃಹ ಸಿಬ್ಬಂದಿಯ ಮೇಲಿನ ಕ್ರೌರ್ಯ, ಮಾನವ ಕಳ್ಳಸಾಗಣೆ ಮುಂತಾದ ಗಂಭೀರ ಆರೋಪಗಳು ಇವರ ವಿರುದ್ಧ ಕೇಳಿಬಂದಿವೆ. ಬ್ರಿಟನ್ನಲ್ಲಿ ನೆಲೆಸಿರುವ ಶ್ರೀಮಂತ ಕುಟುಂಬವಿದು. ಸ್ವಿಡ್ಜರ್ಲೆಂಡ್ನಲ್ಲಿರೋ ಇವರ ನಿವಾಸದಲ್ಲಿ ಕಡಿಮೆ ವೇತನ ಕೊಟ್ಟು ಸಿಬ್ಬಂದಿಯನ್ನು 16 ರಿಂದ 18 ಗಂಟೆಗಳ ಕಾಲ ದುಡಿಸಿಕೊಳ್ಳಲಾಗುತ್ತಿದೆಯಂತೆ. ಹಿಂದೂಜಾ ಸಿಬ್ಬಂದಿಗಿಂತಲೂ ತನ್ನ ನಾಯಿಗಳಿಗೆ ಹೆಚ್ಚು ಖರ್ಚು ಮಾಡುತ್ತಾರೆ ಎಂಬ ಆರೋಪಗಳಿವೆ. ಇವರ ಮನೆಯಲ್ಲಿರೋ ಕೆಲಸಗಾರರಿಗೆ ರಜೆಯೇ ಇಲ್ಲ, ಹೊರಗೆ ಹೋಗಲು ಅವಕಾಶವಿರಲಿಲ್ಲ. ಅವರ ಪಾಸ್ಪೋರ್ಟ್ಗಳನ್ನು ಸಹ ಮುಟ್ಟುಗೋಲು ಹಾಕಿಕೊಳ್ಳಲಾಯಿತು.
ಹಿಂದೂಜಾ ಕುಟುಂಬವು ನಾಯಿಗಳಿಗಾಗಿ ಸುಮಾರು 8,09,399 ರೂಪಾಯಿ ಖರ್ಚು ಮಾಡಿದ್ದರೆ, ಸಿಬ್ಬಂದಿ ವಾರದ ಏಳು ದಿನ 18 ಗಂಟೆಗಳ ಕಾಲ ಕೆಲಸ ಮಾಡಿದ್ದಕ್ಕೆ ಕೇವಲ 660 ರೂಪಾಯಿ ಸಂಬಳ ಪಡೆದಿದ್ದಾರೆ. ಅವರ ಸಂಬಳವನ್ನು ಭಾರತೀಯ ಕರೆನ್ಸಿಯಲ್ಲಿ ನೀಡಲಾಗಿದೆ. ಇದರಿಂದಾಗಿ ಆ ಹಣವನ್ನು ಸ್ವಿಡ್ಜರ್ಲೆಂಡ್ನಲ್ಲಿ ಖರ್ಚು ಮಾಡಲು ಸಾಧ್ಯವಾಗಲೇ ಇಲ್ಲ. ಹಿಂದೂಜಾ ಫ್ಯಾಮಿಲಿ ಕೆಲಸಗಾರರ ಪಾಸ್ಪೋರ್ಟ್ ಕಸಿದುಕೊಂಡಿದೆಯಂತೆ. ಅಷ್ಟೇ ಅಲ್ಲ ಈ ಸಿಬ್ಬಂದಿ ಕೆಲಸ ಬಿಡುವಂತಿಲ್ಲ.
ಬ್ರಿಟನ್ನ ಅತ್ಯಂತ ಶ್ರೀಮಂತ ಕುಟುಂಬ ಎನಿಸಿಕೊಂಡಿದೆ ಈ ಫ್ಯಾಮಿಲಿ. ಹಿಂದೂಜಾ ಗ್ರೂಪ್ನ ಕಮಾಂಡ್ ಈ ಕುಟುಂಬದ ಕೈಯಲ್ಲಿದೆ. ಟೆಲಿಕಾಂ, ತೈಲ ಮತ್ತು ಅನಿಲ, ವಿದ್ಯುತ್ ಮತ್ತು ಮೂಲಸೌಕರ್ಯ, ರಿಯಾಲಿಟಿ, ಆಟೋ, ಹೆಲ್ತ್ಕೇರ್ನಂತಹ ವಿವಿಧ ಕ್ಷೇತ್ರಗಳಲ್ಲಿ ಈ ಸಂಸ್ಥೆಯ ವಹಿವಾಟುಗಳಿವೆ. 110 ವರ್ಷಗಳ ಹಿಂದೆಯೇ ಸಂಸ್ಥೆಯನ್ನು ಕಟ್ಟಲಾಯ್ತು. 1914 ರಲ್ಲಿ ಭಾರತದ ಸಿಂಧ್ ಪ್ರಾಂತ್ಯದ ಶಿಕಾರ್ಪುರ್ ಜಿಲ್ಲೆಯಲ್ಲಿ ಜನಿಸಿದ ದೀಪಚಂದ್ ಹಿಂದುಜಾ ಅವರು ಹಿಂದೂಜಾ ಗ್ರೂಪ್ ಅನ್ನು ಸ್ಥಾಪಿಸಿದರು.
1919 ರಲ್ಲಿ ಅವರು ಇರಾನ್ನಲ್ಲಿ ಕಂಪನಿಯ ಮೊದಲ ಅಂತರರಾಷ್ಟ್ರೀಯ ಕಚೇರಿ ತೆರೆದರು. 1979ರ ಬಳಿಕ ಇಸ್ಲಾಮಿಕ್ ಕ್ರಾಂತಿಯಿಂದಾಗಿ ಕಂಪನಿಯ ಪ್ರಧಾನ ಕಛೇರಿ ಲಂಡನ್ಗೆ ಸ್ಥಳಾಂತರಗೊಂಡಿತು. ಅಂದಿನಿಂದ ಕಂಪನಿಯು ಲಂಡನ್ನಿಂದ ಮಾತ್ರ ಕಾರ್ಯನಿರ್ವಹಿಸುತ್ತಿದೆ.
ದೀಪಚಂದ್ ಹಿಂದುಜಾ ನಂತರ ಅವರ ಮಕ್ಕಳಾದ ಶ್ರೀಚಂದ್ ಹಿಂದುಜಾ, ಗೋಪಿಚಂದ್, ಪ್ರಕಾಶ್ ಮತ್ತು ಅಶೋಕ್ ಹಿಂದುಜಾಗೆ ಅಧಿಕಾರ ಹಸ್ತಾಂತರಿಸಲಾಯಿತು. ಕಳೆದ ವರ್ಷ ಶ್ರೀಚಂದ್ ಹಿಂದುಜಾ ಮೃತಪಟ್ಟಿದ್ದಾರೆ.
ಹಿಂದೂಜಾ ಗ್ರೂಪ್ನ ವ್ಯವಹಾರ ಸುಮಾರು 50 ದೇಶಗಳಲ್ಲಿ ಹರಡಿದೆ. ಒಂದೂವರೆ ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳು ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಭಾರತದಲ್ಲಿ ಅಶೋಕ್ ಲೇಲ್ಯಾಂಡ್, ಗಲ್ಫ್ ಆಯಿಲ್ ಲಿಮಿಟೆಡ್, ಇಂಡಸ್ಇಂಡ್ ಬ್ಯಾಂಕ್, ಹಿಂದೂಜಾ ಟೆಕ್, ಹಿಂದೂಜಾ ಫೈನಾನ್ಸ್ನಂತಹ ದೊಡ್ಡ ಕಂಪನಿಗಳಿವೆ.
ಹಿಂದೂಜಾ ಕುಟುಂಬದ ಹೆಸರು ಬೋಫೋರ್ಸ್ ಹಗರಣದಲ್ಲೂ ಥಳುಕು ಹಾಕಿಕೊಂಡಿದೆ. ಹಗರಣದಲ್ಲಿ ಶ್ರೀಚಂದ್, ಗೋಪಿಚಂದ್ ಮತ್ತು ಪ್ರಕಾಶ್ ಹಿಂದುಜಾ ಹೆಸರುಗಳೂ ಕೇಳಿ ಬಂದಿದ್ದವು. ಆದರೆ 2005 ರಲ್ಲಿ ದೆಹಲಿ ನ್ಯಾಯಾಲಯವು ಹಿಂದೂಜಾ ಬ್ರದರ್ಸ್ ವಿರುದ್ಧದ ಆರೋಪಗಳನ್ನು ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ವಜಾಗೊಳಿಸಿತ್ತು.
ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಹಿಂದೂಜಾ ಕುಟುಂಬ ಸಾಕಷ್ಟು ಸುದ್ದಿಯಲ್ಲಿತ್ತು. 8 ವರ್ಷಗಳಿಂದ ಆಸ್ತಿ ವಿವಾದ ಮುಂದುವರಿದಿತ್ತು. ಆಸ್ತಿಗೆ ಸಂಬಂಧಿಸಿದ ವಿವಾದವು ಎಷ್ಟು ಹೆಚ್ಚಾಯಿತು ಎಂದರೆ ಎಲ್ಲಾ ನಾಲ್ಕು ಸಹೋದರರು ತಮ್ಮ ವ್ಯವಹಾರಗಳೊಂದಿಗೆ ವಿವಿಧ ದೇಶಗಳಲ್ಲಿ ನೆಲೆಸಿದರು. ಹಿಂದೂಜಾ ಕುಟುಂಬದ ಪ್ರಸ್ತುತ ಸಂಪತ್ತು 20 ಶತಕೋಟಿ ಅಮೆರಿಕನ್ ಡಾಲರ್. ಫೋರ್ಬ್ಸ್ ಬಿಡುಗಡೆ ಮಾಡಿದ ಭಾರತದ ಶ್ರೀಮಂತ ವ್ಯಕ್ತಿಗಳಲ್ಲಿ ಹಿಂದೂಜಾ ಸಹೋದರರು ಎಂಟನೇ ಸ್ಥಾನದಲ್ಲಿದ್ದಾರೆ.
ಸೇವಕರ ಮೇಲಿನ ಕ್ರೌರ್ಯ, ಶೋಷಣೆ ಮತ್ತು ಮಾನವ ಕಳ್ಳಸಾಗಣೆ ಆರೋಪಗಳ ಹಿನ್ನೆಲೆಯಲ್ಲಿ ಸ್ವಿಡ್ಜರ್ಲೆಂಡ್ನಲ್ಲಿ ಇವರ ವಿರುದ್ಧ ವಿಚಾರಣೆ ಆರಂಭವಾಗಿದೆ. ಪ್ರಕಾಶ್ ಹಿಂದುಜಾ, ಪತ್ನಿ ಕಮಲ್ ಹಿಂದುಜಾ, ಪುತ್ರ ಅಜಯ್ ಹಿಂದುಜಾ ಮತ್ತು ಪತ್ನಿ ನಮ್ರತಾ ಹಿಂದುಜಾ ವಿರುದ್ಧ ಈ ಆರೋಪ ಮಾಡಲಾಗಿದೆ. ಆದರೆ ಹಿಂದೂಜಾ ಕುಟುಂಬ ಈ ಆರೋಪವನ್ನು ನಿರಾಕರಿಸಿದೆ.