ಬೆಳಗಾವಿ: ಮೂವರು ಮಕ್ಕಳನ್ನು ಬಿಟ್ಟು ಮಹಿಳೆಯೊಬ್ಬರು ತನ್ನ ಪ್ರಿಯಕರನೊಂದಿಗೆ ಓಡಿ ಹೋಗಿರುವ ಘಟನೆ ಬೆಳಗಾವಿಯ ಗಣೇಶಪುರದಲ್ಲಿ ಬೆಳಕಿಗೆ ಬಂದಿದೆ.
ತಾಯಿ ಕಾಣೆಯಾಗಿದ್ದಾರೆ ಹುಡುಕಿಕೊಡಿ ಎಂದು ಮೂವರು ಮಕ್ಕಳು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಸರ್ಕಾರಿ ನೌಕರಿಯಲ್ಲಿದ್ದ ಪತಿ ಅಕಾಲಿಕ ಮರಣದ ಬಳಿಕ ಅನುಕಂಪದ ಆಧಾರದಲ್ಲಿ ಸರ್ಕಾರಿ ಕೆಲಸ ಪಡೆದಿದ್ದ ಮಹಿಳೆ, ತನ್ನ ಮೂವರು ಮಕ್ಕಳನ್ನು ಬಿಟ್ಟು 40 ವರ್ಷದ ವ್ಯಕ್ತಿಯ ಜೊತೆ ಓಡಿ ಹೋಗಿದ್ದಾಳೆ. ತಾಯಿ ಮನೆಗೆ ಬಾರದೇ ನಾಪತ್ತೆಯಾಗಿದ್ದು, ಬಾಡಿಗೆ ಕಟ್ಟಲು ಸಾಧ್ಯವಾಗದೇ ಪರದಾಡುತ್ತಿರುವ ಮಕ್ಕಳು ಅಂತಿಮವಾಗಿ ಕ್ಯಾಂಪ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ತಮ್ಮ ತಾಯಿಯನ್ನು ಹುಡುಕಿಕೊಡಿ ಎಂದು ಮನವಿ ಮಾಡಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ಪರಿಶೀಲನೆ ನಡೆಸಿದಾಗ ಮಕ್ಕಳ ತಾಯಿ ಬೇರೊಬ್ಬನ ಜೊತೆ ವಾಸವಾಗಿರುವುದು ಗೊತ್ತಾಗಿದೆ. ಮಕ್ಕಳು ಬೀದಿಗೆ ಬಂದಿದ್ದಾರೆ. ಮಕ್ಕಳನ್ನು ನೋಡಿಕೊಳ್ಳುವಂತೆ ಬುದ್ಧಿ ಹೇಳಿದರೂ ಒಪ್ಪದ ಮಹಿಳೆ ತಾನು ಪ್ರಿಯಕರನೊಂದಿಗೆ ಇರುವುದಾಗಿ ಹಠ ಹಿಡಿದಿದ್ದಾಳೆ.
ತಾಯಿಯನ್ನು ತಮ್ಮ ಜೊತೆ ಕಳುಹಿಸಿಕೊಡಿ, ಶಾಲೆ-ಕಾಲೇಜು ಬಿಟ್ಟು ತಾವೇ ಕೆಲಸಕ್ಕೆ ಹೋಗುವುದಾಗಿ ಮಕ್ಕಳು ಕಣ್ಣೀರಿಟ್ಟಿದ್ದಾರೆ. ಆದಾರೂ ಮಕ್ಕಳ ಜೊತೆ ಹೋಗಲು ತಾಯಿ ನಿರಾಕರಿಸಿದ್ದಾಳೆ. ಪೊಲೀಸರು ಇಕ್ಕಟ್ಟಿಗೆ ಸಿಲುಕಿದ್ದು, ಮಹಿಳೆಯ ಮನವೊಲಿಕೆಗೆ ಯತ್ನ ನಡೆಸಿದ್ದಾರೆ.