ದಾವಣಗೆರೆ: ದಾವಣಗೆರೆ ಜಿಲ್ಲೆ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಆದಿಲ್ ಮೃತಪಟ್ಟ ಪ್ರಕರಣದ ಮರಣೋತ್ತರ ಪರೀಕ್ಷೆ ವರದಿ ಸಿಐಡಿ ಅಧಿಕಾರಿಗಳ ಕೈ ಸೇರಿದೆ. ಹೃದಯ ಸಂಬಂಧಿ ಕಾಯಿಲೆಯಿಂದ ಆದಿಲ್ ಸಾವನ್ನಪ್ಪಿರುವುದು ದೃಢಪಟ್ಟಿದೆ ಎಂದು ಹೇಳಲಾಗಿದೆ.
ಪೊಲೀಸರು ಆದಿಲ್ ನನ್ನು ಠಾಣೆಗೆ ಕರೆದುಕೊಂಡು ಬಂದ ಸಂದರ್ಭದಲ್ಲಿ ಕಡಿಮೆ ರಕ್ತದೊತ್ತಡದಿಂದ ಹೃದಯಸ್ತಂಭನಗೊಂಡು ಆದಿಲ್ ಸಾವನ್ನಪ್ಪಿದ್ದಾರೆ ಎಂದು ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ಉಲ್ಲೇಖಿಸಿದ್ದಾರೆ ಎಂದು ಹೇಳಲಾಗಿದೆ.
ಮೃತ ಆದಿಲ್ ನ ದೇಹದ ಇತರ ಕೆಲವು ಅಂಗಾಂಶಗಳನ್ನು ಹೆಚ್ಚಿನ ಪರೀಕ್ಷೆಗಾಗಿ ಎಫ್ಎಸ್ಎಲ್ ಗೆ ಕಳುಹಿಸಲಾಗಿದ್ದು, ಎಫ್ಎಸ್ಎಲ್ ವರದಿಗಾಗಿ ತನಿಖಾಧಿಕಾರಿಗಳು ಕಾಯುತ್ತಿದ್ದಾರೆ. ಮಟ್ಕಾ ಜೂಜಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಶುಕ್ರವಾರ ಆದಿಲ್ ನನ್ನು ಪೊಲೀಸರು ವಿಚಾರಣೆಗೆ ಕರೆತಂದ ಕೆಲವೇ ನಿಮಿಷಗಳಲ್ಲಿ ಆತ ಮೃತಪಟ್ಟಿದ್ದ. ಇದು ಲಾಕಪ್ ಡೆತ್ ಎಂದು ಆರೋಪಿಸಿ ಸಂಬಂಧಿಕರು ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಿದ್ದರು. ಇದೇ ವೇಳೆ ಕೆಲವು ಕಿಡಿಗೇಡಿಗಳು ಪೊಲೀಸ್ ಠಾಣೆ ಮೇಲೆ ದಾಳಿ ಮಾಡಿ ಕಲ್ಲು ತೂರಾಟ ನಡೆಸಿದ್ದರು. ಪೊಲೀಸ್ ವಾಹನಗಳನ್ನು ಹಾನಿಗೊಳಿಸಿದ್ದರು.