ಬೆಂಗಳೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ಮೇ 31 ರಿಂದ ಜೂನ್ 3ರವರೆಗೆ ಭಾರಿ ಗಾಳಿ, ಜೋರು ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಅರಬ್ಬಿ ಸಮುದ್ರದಲ್ಲಿ ಪ್ರಬಲ ಮಾರುತಗಳ ಪರಿಣಾಮ ರಾಜ್ಯಾದ್ಯಂತ ಮೇ 31 ರಿಂದ ಜೂನ್ 5 ರ ವರೆಗೆ ಮಳೆ ಆಗಲಿದೆ. ಮೇ 31 ರಿಂದ ಜೂನ್ 3ರವರೆಗೆ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಭಾರಿ ಗಾಳಿ ಅಬ್ಬರದೊಂದಿಗೆ ಮಳೆ ಆಗಲಿದೆ ಎಂದು ಹೇಳಲಾಗಿದೆ.
ದೇಶದ ದಕ್ಷಿಣ ಪರ್ಯಾಯ ಪ್ರಸ್ಥಭೂಮಿ ಭಾಗವಾಗಿರುವ ಅಕ್ಷಾಂಶ 8 ಡಿಗ್ರಿ ಉತ್ತರಕ್ಕೆ ವಿರುದ್ಧ ದಿಕ್ಕಿನಿಂದ ಪ್ರಬಲ ಗಾಳಿ ಬೀಸುತ್ತಿದ್ದು, ದಕ್ಷಿಣ ಕೇರಳದ ಆಗ್ನೇಯ ಅರೇಬಿಯನ್ ಸಮುದ್ರದ ಉಷ್ಣವಲಯದಲ್ಲಿ ಚಂಡಮಾರುತ ಪರಿಚಲನೆ ಗೋಚರವಾಗಿದೆ. ಕೇರಳದ ಪಶ್ಚಿಮ ಕರಾವಳಿಯುದ್ಧಕ್ಕೂ ಪ್ರಬಲ ಮಾರುತಗಳು ಬೀಸುತ್ತಿರುವುದರಿಂದ ಮುಂದಿನ 7 ದಿನಗಳಲ್ಲಿ ರಾಜ್ಯಾದ್ಯಂತ ಕೆಲವು ಕಡೆ ಬಿರುಗಾಳಿ ಸಹಿತ ಗುಡುಗು ಸಿಡಿಲಿನಿಂದ ಕೂಡಿದ ಮಳೆಯಾಗುವ ಸಂಭವ ಇದೆ ಎಂದು ಕರ್ನಾಟಕ ವಿಪತ್ತು ನಿರ್ವಹಣಾ ಪ್ರಾಧಿಕಾರ ಹೇಳಿದೆ.
ಮುಂಗಾರು ಮಾರುತಗಳು ಕೇರಳ ಪ್ರವೇಶಿಸಿದ್ದು, ಮುಂದಿನ ಎರಡು ಮೂರು ದಿನಗಳಲ್ಲಿ ಕರ್ನಾಟಕದ ಕೆಲವು ಜಿಲ್ಲೆಗಳಿಗೆ ವ್ಯಾಪಿಸಲಿದೆ.