ಲೋಕಸಭೆ ಚುನಾವಣೆಯಲ್ಲಿ ಜೂನ್ 1 ರಂದು ಕೊನೆಯ ಹಂತದ ಮತದಾನ ನಡೆಯಲಿದ್ದು ರಾಜಕೀಯ ಪಕ್ಷಗಳ ನಾಯಕರು ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ಒಡಿಶಾ ಸಿಎಂ ನವೀನ್ ಪಟ್ನಾಯಕ್ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡುತ್ತಿರುವ ವೀಡಿಯೊವೊಂದು ನೆಟ್ಟಿಗರ ಗಮನ ಸೆಳೆದಿದ್ದು ಇಳಿವಯಸ್ಸಿನಲ್ಲಿರುವ ಅವರ ಆರೋಗ್ಯದ ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸಿದ್ದಾರೆ.
ಮಂಗಳವಾರ ಚುನಾವಣಾ ಭಾಷಣ ವೇಳೆ ನವೀನ್ ಪಟ್ನಾಯಕ್ ವೇದಿಕೆಯಲ್ಲಿ ನಿಂತು ಮಾತನಾಡುತ್ತಿದ್ದಾಗ ಅವರಿಗೆ ಮಾಜಿ ಐಎಎಸ್ ಅಧಿಕಾರಿ ಮತ್ತು ನವೀನ್ ಪಟ್ನಾಯಕ್ ಅವರ ಆಪ್ತ ಸಹಾಯಕ ವಿಕೆ ಪಾಂಡಿಯನ್ ಮೈಕ್ ಹಿಡಿದು ನಿಂತು ಸಹಾಯ ಮಾಡಿದ್ದರು.
ಮಾತನಾಡುವ ವೇಳೆ ನವೀನ್ ಪಟ್ನಾಯಕ್ ಅವರ ಕೈಗಳು ನಡುಗುತ್ತಲೇ ಇದ್ದವು. ಇದನ್ನು ನೋಡಿದ ಪಾಂಡಿಯನ್ , ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರ ಎಡಗೈಯನ್ನು ಜನರಿಗೆ ಕಾಣದಂತೆ ಪೋಡಿಎಂ ಮೇಲೆ ಇರಿಸಿದರು. ಈ ವಿಡಿಯೋ ವೈರಲ್ ಆಗಿದೆ.
ಈ ಹಿಂದೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರ ವಯಸ್ಸು ಮತ್ತು ಆರೋಗ್ಯ ಸಮಸ್ಯೆಗಳ ಕಾರಣ ನಿವೃತ್ತಿಯಾಗಬೇಕು ಎಂದು ಹೇಳಿದ್ದರು. ಪೂರ್ವ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಒಡಿಯಾ ಮಾತನಾಡುವ ಯುವ ‘ಭೂಮಿಪುತ್ರ’ನನ್ನು ಬಿಜೆಪಿ ಮುಖ್ಯಮಂತ್ರಿಯನ್ನಾಗಿ ಮಾಡುತ್ತದೆ ಎಂದು ಅಮಿತ್ ಶಾ ಪ್ರತಿಜ್ಞೆ ಮಾಡಿದ್ದರು.