ಭಾರತೀಯ ಚಿತ್ರರಂಗದ ಅತ್ಯಂತ ಪ್ರತಿಭಾವಂತ ಮತ್ತು ಎವರ್ ಗ್ರೀನ್ ತಾರೆಗಳಲ್ಲಿ ನೀನಾ ಗುಪ್ತಾ ಸಹ ಒಬ್ಬರು. ಅವರ ವೃತ್ತಿಜೀವನವು 1982 ರಲ್ಲಿ ಪ್ರಾರಂಭವಾದ ಬಳಿಕ ನಂತರ ವಿರಾಮ ತೆಗೆದುಕೊಂಡಿದ್ದೇ ಇಲ್ಲ. ಸದ್ಯ 64 ನೇ ವಯಸ್ಸಿನಲ್ಲಿಯೂ ಸಹ, ಅವರು “ಬಧಾಯಿ ಹೋ,” “ಉಂಚೈ,” “ವಿದಾಯ,” ಮತ್ತು “ಲಸ್ಟ್ ಸ್ಟೋರೀಸ್ 2” ನಂತಹ ಚಿತ್ರಗಳಲ್ಲಿ ಅಸಾಧಾರಣ ಅಭಿನಯದೊಂದಿಗೆ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ವೈಯಕ್ತಿಕ ಜೀವನದಲ್ಲಿ ಅವರು ದೆಹಲಿ ಮೂಲದ ಅಕೌಂಟೆಂಟ್ ವಿವೇಕ್ ಮೆಹ್ರಾ ಅವರನ್ನು ವಿವಾಹವಾಗಿದ್ದು ಹೆಸರಾಂತ ಫ್ಯಾಷನ್ ಡಿಸೈನರ್ ಮಸಾಬಾ ಗುಪ್ತಾ ಅವರ ತಾಯಿಯಾಗಿದ್ದಾರೆ.
ನೀನಾ ಗುಪ್ತಾ ಅವರೊಂದಿಗಿನ ಇತ್ತೀಚಿನ ಸಂದರ್ಶನವೊಂದರಲ್ಲಿ, ಅವರು ತಮ್ಮ ವೃತ್ತಿಜೀವನದ ಆರಂಭದಲ್ಲಿ ಆರ್ಥಿಕ ಕಷ್ಟಗಳಿಂದ ತೆಗೆದುಕೊಳ್ಳಬೇಕಾದ ಕಠಿಣ ನಿರ್ಧಾರಗಳ ಬಗ್ಗೆ ಮಾತನಾಡಿದರು.
ಇಷ್ಟವಿಲ್ಲದಿದ್ದರೂ ಹಣಕ್ಕಾಗಿ ಕೆಲವು ಪಾತ್ರಗಳನ್ನು ಮಾಡಬೇಕಾಯಿತು ಎಂಬುದನ್ನ ನೆನಪಿಸಿಕೊಂಡರು. ಅವಶ್ಯಕತೆಗಾಗಿ ಎಲ್ಲವೂ ಬದಲಾಯ್ತು, ಮೊದಲು ಹಣಕಾಸಿನ ಅಗತ್ಯವಿತ್ತು. ಅದಕ್ಕಾಗಿ ತುಂಬಾ ಕೆಟ್ಟ ಕೆಲಸ/ ಪಾತ್ರಗಳನ್ನು ಮಾಡಬೇಕಾಯ್ತು. ಅದೆಷ್ಟೋ ಸಲ ಈ ಚಿತ್ರ ಬಿಡುಗಡೆಯಾಗಬಾರದೆಂದು ನಾನು ದೇವರಲ್ಲಿ ಪ್ರಾರ್ಥಿಸುತ್ತಿದ್ದೆ ಎಂದಿದ್ದಾರೆ.
ವೃತ್ತಿಜೀವನವು ಮುಂದುವರೆದಂತೆ ಮತ್ತು ಉದ್ಯಮದಲ್ಲಿ ತಮ್ಮ ಸ್ಥಾನಮಾನ ಉತ್ತಮವಾಗುತ್ತಿದ್ದಂತೆ ನೀನಾ ತಮಗೆ ಬೇಕಾದ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದರು. ಬೇಡವಾದ ಪಾತ್ರಗಳಿಗೆ ನೇರವಾಗಿ ನೋ ಎಂದು ಹೇಳುತ್ತಿದ್ದರಂತೆ. ಮೊದಲೆಲ್ಲಾ ಹಣ ಬೇಕಾಗಿದ್ದರಿಂದ ನೋ ಎಂದು ಹೇಳಲು ಆಗುತ್ತಿರಲಿಲ್ಲ. ಆದರೆ ಇಷ್ಟವಾಗದ ಯೋಜನೆಗಳಿಗೆ ನೋ ಎಂದು ಹೇಳುತ್ತಿದ್ದೆ ಎಂದು ತಮ್ಮ ಬದುಕು ಉನ್ನತ ಸ್ಥಿತಿಯತ್ತ ಹೊರಳಿದ್ದ ಬಗ್ಗೆ ತಿಳಿಸಿದ್ದಾರೆ.
ತಮ್ಮ ಆರಂಭಿಕ ಹೋರಾಟಗಳನ್ನು ನೆನೆಯುತ್ತಾ, ನೀನಾ ಅವರು ದೆಹಲಿಯಿಂದ ಬಾಂಬೆಗೆ ಸ್ಥಳಾಂತರಗೊಂಡಾಗ ಅವರು ಸಹಿಸಿಕೊಳ್ಳಬೇಕಾದ ಗಮನಾರ್ಹ ಜೀವನಶೈಲಿಯ ಬದಲಾವಣೆಗಳ ಬಗ್ಗೆ ಮಾತನಾಡಿದರು.
ಬಾಂಬೆಯ ವೇಗದ ಜೀವನಕ್ಕೆ ಹೊಂದಿಕೊಳ್ಳುವುದು ಸವಾಲಾಗಿತ್ತು, ಆಗಾಗ್ಗೆ ನನಗೆ ಆರೋಗ್ಯ ಕೆಡುತ್ತಿತ್ತು. ಹೀಗಾಗಿ ನಾನು ದೆಹಲಿಗೆ ವಾಪಸ್ ಹೋಗಿ ಪಿಹೆಚ್ ಡಿ ಮಾಡಬೇಕೇಂದು ನಿರ್ಧರಿಸಿ ಲಗೇಜ್ ಪ್ಯಾಕ್ ಮಾಡಿಕೊಳ್ತಿದ್ದೆ. ಆದರೆ ಮುಂಬೈ ಮಾಯಾನಗರಿ ಅದಕ್ಕೆ ಅವಕಾಶ ಕೊಡಲಿಲ್ಲ. ದೆಹಲಿಗೆ ಹೋಗೋಣವೆಂದು ಇಂದು ನಿರ್ಧರಿಸಿದ್ದರೆ ನಾಳೆ ಬೆಳಗ್ಗೆ ಕೆಲಸ ಬರ್ತಿದ್ದವು ಎಂದಿದ್ದಾರೆ.
ನೀನಾ ಗುಪ್ತಾ ಅವರ ಸಿನಿ ಪ್ರಯಾಣವು ಅವರ ದೃಢತೆ ಮತ್ತು ಸಮರ್ಪಣೆಗೆ ಸಾಕ್ಷಿಯಾಗಿದೆ. ಕಷ್ಟಗಳ ಹೊರತಾಗಿಯೂ, ಅವರು ಬಹುಮುಖ ಮತ್ತು ಗೌರವಾನ್ವಿತ ನಟಿಯಾಗಿ ಹೊರಹೊಮ್ಮಿದ್ದಾರೆ, ಅವರ ಪರಿಶ್ರಮ ಮತ್ತು ಯಶಸ್ಸಿನ ಕಥೆಯೊಂದಿಗೆ ಅನೇಕರನ್ನು ಪ್ರೇರೇಪಿಸಿದ್ದಾರೆ. ಮೇ 28 ರಂದು ಅಮೆಜಾನ್ ಪ್ರೈಮ್ ನಲ್ಲಿ ಪ್ರದರ್ಶನಗೊಳ್ಳುವ ಪಂಚಾಯತ್ ಸೀಸನ್ 3 ರಲ್ಲಿ ಕಾಣಿಸಿಕೊಳ್ಳಲಿದ್ದಾರೆ.