ಒಂದ್ಕಡೆ ಚುನಾವಣಾ ಅಖಾಡ ರಂಗೇರಿದ್ದರೆ ಇನ್ನೊಂದ್ಕರೆ ಷೇರು ಮಾರುಕಟ್ಟೆ ಕೂಡ ಹೊಸ ದಾಖಲೆಯನ್ನೇ ಸೃಷ್ಟಿಸಿದೆ. ಲೋಕಸಭೆ ಚುನಾವಣೆ ಫಲಿತಾಂಶಕ್ಕೂ ಮುನ್ನ ಷೇರುಪೇಟೆ ಮತ್ತೊಮ್ಮೆ ಇತಿಹಾಸ ಸೃಷ್ಟಿಸಿದೆ. ಸೆನ್ಸೆಕ್ಸ್ ಮೊದಲ ಬಾರಿಗೆ 75 ಸಾವಿರ ಗಡಿ ದಾಟಿದರೆ, ನಿಫ್ಟಿ ಕೂಡ ಹೊಸ ಎತ್ತರವನ್ನು ಮುಟ್ಟಿದೆ.
ಗುರುವಾರ ಷೇರು ಮಾರುಕಟ್ಟೆಯು ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದೆ. ಸೆನ್ಸೆಕ್ಸ್ 75,407 ಪಾಯಿಂಟ್‌ಗೆ ತಲುಪಿದರೆ ನಿಫ್ಟಿ 22,959ರ ಮಟ್ಟ ತಲುಪಿದೆ. ಈ ಹಿಂದೆ ಏಪ್ರಿಲ್ 9 ರಂದು ಸೆನ್ಸೆಕ್ಸ್ 75,124ರಷ್ಟಾಗಿತ್ತು. ನಿಫ್ಟಿಯ ಗರಿಷ್ಠ ಪಾಯಿಂಟ್ 22,794 ಆಗಿತ್ತು. ಈ ದಾಖಲೆಯನ್ನು ಸೆನ್ಸೆಕ್ಸ್ ಮುರಿದಿದೆ.
ಸೆನ್ಸೆಕ್ಸ್ 1186.33 ಪಾಯಿಂಟ್ ಜಿಗಿತದೊಂದಿಗೆ ಸಾರ್ವಕಾಲಿಕ ಗರಿಷ್ಠ ಮಟಕ್ಕೇರಿದೆ. ಎನ್‌ಎಸ್‌ಇ ನಿಫ್ಟಿ 349.25 ಪಾಯಿಂಟ್ ಏರಿಕೆಯಾಗಿ 22,947.05 ಪಾಯಿಂಟ್‌ಗಳಿಗೆ ತಲುಪಿದೆ.
ಗುರುವಾರ ಅತಿಹೆಚ್ಚು ಏರಿಕೆ ಕಂಡ ಷೇರುಗಳೆಂದರೆ ಲಾರ್ಸೆನ್ ಮತ್ತು ಟೂಬ್ರೊ (ಎಲ್ & ಟಿ), ಆಕ್ಸಿಸ್ ಬ್ಯಾಂಕ್, ಇಂಡಸ್‌ಇಂಡ್ ಬ್ಯಾಂಕ್, ಮಾರುತಿ, ಮಹೀಂದ್ರಾ ಮತ್ತು ಮಹೀಂದ್ರಾ, ಎಚ್‌ಡಿಎಫ್‌ಸಿ ಬ್ಯಾಂಕ್, ಬಜಾಜ್ ಫಿನ್‌ಸರ್ವ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ರಿಲಯನ್ಸ್ ಇಂಡಸ್ಟ್ರೀಸ್, ಕೊಚ್ಚಿನ್ ಶಿಪ್‌ಯಾರ್ಡ್. ಶಿಪ್ಪಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ ಷೇರುಗಳು ಕೂಡ ಏರುಗತಿಯಲ್ಲಿ ಸಾಗಿವೆ. ಇದಲ್ಲದೇ ರೈಲ್ವೇ ಷೇರುಗಳಲ್ಲಿ ಉತ್ತಮ ಏರಿಕೆ ಕಂಡುಬಂದಿದೆ.
ಐಆರ್‌ಎಫ್‌ಸಿ, ಆರ್‌ವಿಎನ್‌ಎಲ್ ಷೇರುಗಳು ಶೇ.8 ಕ್ಕಿಂತ ಹೆಚ್ಚು ಏರಿಕೆ ಕಂಡವು. ಆದರೆ ಸನ್ ಫಾರ್ಮಾ, ಪವರ್ ಗ್ರಿಡ್, ಎನ್‌ಟಿಪಿಸಿ ಮತ್ತು ಜೆಎಸ್‌ಡಬ್ಲ್ಯೂ ಸ್ಟೀಲ್ ಷೇರುಗಳು ನಷ್ಟ ಅನುಭವಿಸಿವೆ. ನಿಫ್ಟಿಯ ಬ್ಯಾಂಕ್ ಮತ್ತು ಆಟೋ ಸೂಚ್ಯಂಕದಲ್ಲಿ ಸುಮಾರು 2 ಪ್ರತಿಶತ ಏರಿಕೆಯಾಗಿದೆ.
ಷೇರು ಮಾರುಕಟ್ಟೆ ಏರಿಕೆಗೆ ಕಾರಣ
ಜೂನ್ 4 ರಂದು ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬೀಳಲಿದೆ. ಬಿಜೆಪಿ ಸರ್ಕಾರ ರಚನೆಯಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, ಷೇರು ಮಾರುಕಟ್ಟೆಯು ಹೊಸ ದಾಖಲೆಯ ಎತ್ತರವನ್ನು ತಲುಪುತ್ತದೆ ಎಂದು ಭವಿಷ್ಯ ನುಡಿದಿದ್ದರು.
ಪ್ರಧಾನಿ ಮೋದಿಯವರ ಈ ಹೇಳಿಕೆಯ ಸಕಾರಾತ್ಮಕ ಪರಿಣಾಮ ಮಾರುಕಟ್ಟೆಯಲ್ಲಿ ಗೋಚರಿಸುತ್ತಿದೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಷೇರುಗಳನ್ನು ಮಾರಾಟ ಮಾಡುತ್ತಿದ್ದರೂ, ದೇಶೀಯ ಸಾಂಸ್ಥಿಕ ಹೂಡಿಕೆದಾರರಿಂದ ಖರೀದಿ ಹೆಚ್ಚುತ್ತಿದೆ. 2024ರ ಹಣಕಾಸು ವರ್ಷಕ್ಕೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸರ್ಕಾರಕ್ಕೆ 2.11 ಕೋಟಿ ರೂಪಾಯಿಗಳ ದಾಖಲೆಯ ಲಾಭಾಂಶವನ್ನು ನೀಡುವ ಸುದ್ದಿ ಮಾರುಕಟ್ಟೆಯ ಮೇಲೆ ಸಕಾರಾತ್ಮಕ ಪರಿಣಾಮ ಬೀರಿದೆ.