
ಚೆನ್ನೈ: ಕೆಲ ದಿನಗಳ ಹಿಂದೆ ಅಪಾರ್ಟ್ ಮೆಂಟ್ ನ ಬಾಲ್ಕನಿಯಿಂದ ಶೆಡ್ ಮೇಲೆ ಬಿದ್ದಿದ ಮಗುವನ್ನು ರಕ್ಷಿಸಿದ್ದ ರೋಚಕ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಅದೃಷ್ಟವಶಾತ್ ಮಗುವಿಗೆ ಯಾವುದೇ ಅಪಾಯವಾಗಿಲ್ಲ ಎಂದು ಎಲ್ಲರೂ ನಿಟ್ಟುಸಿರು ಬಿಟ್ಟಿದ್ದರು. ಆದರೆ ಈಗ ಅದೇ ಮಗುವಿನ ತಾಯಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.
ಚೆನ್ನೈನ ಅಪಾರ್ಟ್ ಮೆಂಟ್ ಒಂದರಲ್ಲಿ ಮಗುವಿನ ತಾಯಿ ಮಗುವನ್ನು ಎತ್ತಿಕೊಂಡಿದ್ದಾಗ ಕೈಜಾರಿ ಮಗು ಬಾಲ್ಕನಿಯಿಂದ ಶೆಡ್ ಮೇಲೆ ಬಿದ್ದಿತ್ತು. ಇದನ್ನು ಕಂಡ ಪಕ್ಕದ ಮನೆಯವರು ಸ್ಥಳೀಯರು ಮಗುವನ್ನು ರಕ್ಷಿಸಿದ್ದರು. ಮಗುವನ್ನು ರಕ್ಷಿಸಿದ ವಿಡಿಯೋ ಸಾಮಾಜಿಕ ಜಾಲತಾನಗಳಲ್ಲಿ ಭಾರಿ ವೈರಲ್ ಆಗಿತ್ತು. ಅಲ್ಲದೇ ತಾಯಿಯ ಬೇಜವಾಬ್ದರಿ, ನಿರ್ಲಕ್ಷದಿಂದಾಗಿಯೇ ಮಗು ಅಪಾರ್ಟ್ ಮೆಂಟ್ ನಿಂದ ಕೆಳಗೆ ಬಿದ್ದಿದೆ ಎಂದು ಹಲವರು ಹಿಗ್ಗಾ ಮುಗ್ಗಾ ಸಾಮಾಜಿಕ ಜಾಲತಾಣಗಳಲ್ಲಿ ಕಂಮೆಂಟ್ ಮಾಡಿದ್ದರು.
ಸೋಷಿಯಲ್ ಮೀಡಿಯಾಗಳಲ್ಲಿನ ಕಮೆಂಟ್, ನೆರೆಹೊರೆಯವರ ಬೈಗುಳದಿಂದ ನೊಂದ ಮಗುವಿನ ತಾಯಿ ರಮ್ಯಾ, ಈಗ ಆತ್ಮಹತ್ಯೆಗೆ ಶರಣಾಗಿದ್ದಾರೆ. ರಮ್ಯಾ ಐಟಿ ಕಂಪನಿಯ ಉದ್ಯೋಗಿ. ರಮ್ಯಾ ಪತಿ ಕೂಡ ಐಟಿ ಉದ್ಯೋಗಿ. ರಮ್ಯಾ ಹಾಗೂ ಆಕೆಯ ಪತಿ ಮಗುವಿನೊಂದಿಗೆ ತವರು ಕರಮಡೈನ ಮನೆಗೆ ಬಂದಿದ್ದರು. ಈ ವೇಳೆ ಪೋಷಕರು ಶುಭಸಮಾರಂಭಕ್ಕೆಂದು ಹೋಗಿದ್ದರು. ಮನೆಯಲ್ಲಿ ಯಾರೂ ಇಲ್ಲದಿರುವ ವೇಳೆ ರಮ್ಯಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಪೋಷಕರು ಮನೆಗೆ ಬರುಷ್ಟರಲ್ಲಿ ರಮ್ಯಾ ಕೊನೆಯುಸಿರೆಳೆದಿದ್ದಳು.
ಕರಮಡೈ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.