ಬೆಂಗಳೂರು: ಭೀಕರ ಬರಗಾಲ, ರಣಬಿಸಿಲ ಹೊಡೆತಕ್ಕೆ ತೊರೆಗಳೆಲ್ಲವೂ ಒಣಗಿ ಅಂತರ್ಜಲ ಮಟ್ಟವೂ ಸಂಪೂರ್ಣ ಕುಸಿದು ಹೋಗಿತ್ತು. 70 ವರ್ಷಗಳ ಇತಿಹಾಸದಲ್ಲಿಯೇ ಮೊದಲ ಬರಿ ಜೀವನದಿ ಕಾವೇರಿ ಬತ್ತಿ ಹೋಗಿತ್ತು. ಆದರೆ ಈಬಾರಿ ಅವಧಿಗೂ ಮೊದಲೇ ಮುಂಗಾರು ಆಗಮನವಾಗಿದೆ. ಹಾಗಾಗಿ ನದಿ, ತೊರೆಗಳಲ್ಲಿ ಮತ್ತೆ ಜೀವಸೆಲೆ ಕಾಣುತ್ತಿದೆ.
ಜೂನ್ ಒಂದರಿಂದ ಮುಂಗಾರು ಮಳೆ ಅಬ್ಬರಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹಾಗಾಗಿ ಅಂತರ್ಜಲದ ಮಟ್ಟವೂ ಸುಧಾರಿಸಲಿದ್ದು, ಕಾವೇರಿ ಒಡಲಿನಲ್ಲಿಯೂ ಮತ್ತೆ ಜಿವಕಳೆ, ಗತವೈಭವ ಸೃಷ್ಟಿಯಾಗುವ ನಿರೀಕ್ಷೆ ಇದೆ.
ಕಳೆದ ಕೆಲ ದಿನಗಳಿಂದ ಕಾವೇರಿ ಕೊಳ್ಳದ ಸುತ್ತಮುತ್ತ ಆಗುತ್ತಿರುವ ಭಾರಿ ಮಳೆಯಿಂದಾಗಿ ಕಾವೇರಿ ಒಡಲು ಮತ್ತೆ ತುಂಬಿಕೊಳ್ಳುತ್ತಿದೆ. ಬರದಿಂದಾಗಿ ನೀರಿನ ಸೆಲೆಯೂ ಇಲ್ಲದೇ ತನ್ನ ಹರಿವಿಕೆಯನ್ನೇ ನಿಲ್ಲಿಸಿದ್ದ ಜೀವನದಿ ಕಾವೇರಿ ಮತ್ತೆ ಮೈದುಂಬಿಕೊಳ್ಳುತ್ತಿದೆ. ಇದು ಕಾವೇರಿ ಕೊಳ್ಳದ ಜನರ ಮೊಗದಲ್ಲಿ ಮಂದಹಾಸಕ್ಕೆ ಕಾರಣವಾಗಿದೆ.
ಕಾವೇರಿ ಮಾತ್ರವಲ್ಲ ಕೊಡಗು ಜಿಲ್ಲೆಯ ಎಲ್ಲಾ ನದಿ, ತೊರೆಗಳು, ಜಲಪಾತಗಳು ಮೈದುಂಬ್ಬಿ ಹರಿಯುತ್ತಿವೆ. ಕೊಡಗಿನ ದುಬಾರೆ, ವಾಲ್ನೂರು, ತೆಪ್ಪದಕಂಡಿ, ಕುಸಾಲನಗರ ವ್ಯಾಪ್ತೊಯಲ್ಲಿ ಜೀವನದಿ ಕಾವೇರಿ 50 ದಿನಗಳ ಬಳಿಕ ಮತ್ತೆ ಹರಿಯಲಾರಂಭಿಸಿದೆ.
ಸುಮಾರು 70 ವರ್ಷಗಳ ಹಿಂದೆ ಸಂಭವಿಸಿದ್ದ ಭೀಕರ ಬರಗಾಲದಿಂದಾಗಿ ಕಾವೇರಿ ಒಡಲು ಬರಿದಾಗಿ ತನ್ನ ಹರಿವಿಕೆಯನ್ನೇ ನಿಲ್ಲಿಸಿತ್ತು. ಅದಾದ ಬಳಿಕ ಈ ವರ್ಷ ಅಂತದ್ದೇ ಬರಗಾಲದ ಹೊಡತ್ತೆ ಸಿಲುಕಿ ಕಾವೇರಿ ನದಿಯಲ್ಲಿ ಜೀವಕಳೆಯೇ ಉಡುಗಿಹೋಗಿತ್ತು. ಆದರೀಗ ಕೊಡಗು, ಪಶ್ಚಿಮ ಘಟ್ಟ ಭಾಗಗಳಲ್ಲಿ ಕೆಲ ದಿನಗಳಿಂದ ಧಾರಾಕಾರ ಮಳೆಯಾಗುತ್ತಿರುವುದರಿಂದ ಜೀವನದಿಯಲ್ಲಿ ಮತ್ತೆ ಜೀವ ಕಳೆ ಬಂದಿದೆ. ಕಾವೇರಿ ನದಿ ಮೈದುಂಬಿ ಹರಿಯುತ್ತಿರುವುದು ಈ ಭಾಗದ ಜನರಲ್ಲಿಯೂ ಸಂತಸ ಮನೆ ಮಾಡಿದೆ.