ಬೆಂಗಳೂರು: ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಇದೀಗ ಬಿಜೆಪಿ ಮುಖಂಡ, ವಕೀಲ ದೇವರಾಜೇಗೌಡ ಹಾಗೂ ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಮಾತನಾಡಿದ್ದಾರೆ ಎಂಬ ಆಡಿಯೋ ವೈರಲ್ ಆಗಿದೆ.
ದೇವರಾಜೇಗೌಡ ಹಾಗೂ ಶಿವರಾಮೇಗೌಡ ಮಾತನಾಡಿದ್ದಾರೆ ಎನ್ನಲಾದ ಒಂದುವರೆ ನಿಮಿಷದ ಆಡಿಯೋ ಸಂಭಾಷಣೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ರಾಜ್ಯ ರಾಜಕೀಯದಲ್ಲಿ ಮತ್ತೆ ಸದ್ದು ಮಾಡಿದೆ.
ಆಡಿಯೋದಲ್ಲಿ ದೇವೇಗೌಡರ ಬಗ್ಗೆ ಶಿವರಾಮೇಗೌಡ ಲಘುವಾಗಿ ಮಾತನಾಡಿದ್ದಾರೆ. ಪೆನ್ ಡ್ರೈವ್ ಕುಮಾರಸ್ವಾಮಿನೇ ಬಿಟ್ಟಿದ್ದಾನೆ ಅಂತಾ ಹೇಳಿ. ಕುಮಾರಸ್ವಾಮಿಗೆ ಅವರ ಮಗ ಮುಂದೆ ಬರಬೇಕು ಎಂಬ ಆಸೆಯಿದೆ. ಆದರೆ ಪ್ರಜ್ವಲ್ ಮುಂದೆ ಬಂದಿದ್ದಾನಲ್ಲ ಅದಕ್ಕೇ ಹೀಗೆ ಮಾಡಿದ್ದಾರೆ ಅಂತಾ ಹೇಳಿ. ದೇವೇಗೌಡ ಹಾಗೂ ಅವರ ಮಕ್ಕಳು ಏನು ಕಡಿಮೆ ಅಂತಾ ಅಂದ್ಕೋಬೇಡಿ. ಇನ್ನೂ ದೇವೇಗೌಡ ಆತ್ಮಹತ್ಯೆ ಮಾಡಿಕೊಳ್ಳಲಿಲ್ವಾ? ಇನ್ನೇನು ವಿಡಿಯೋ ಇದೆ? ಡಿ.ಕೆ ಬೆಳಿಗ್ಗೆ ಮಾತನಾಡಿದ್ರು. ನಿಮ್ಮ ಹತ್ತಿರ ಏನೇನಿದೆ ನಮಗೆ ಕೊಡಿ ನೀವು ತಲೆ ಕೆಡಿಸಿಕೊಳ್ಳಬೇಡಿ. ಅವರನ್ನು ಬಲಿ ಹಾಕೋಕೆ ಸರ್ಕಾರದಿಂದಲೇ ತೀರ್ಮಾನವಾಗಿದೆ ಎಂದಿದ್ದಾರೆ. ಪೆನ್ ಡ್ರೈವ್ ನಾಗಮಂಗಲದಲ್ಲೋ, ಹಾಸನದಲ್ಲೋ ಹಂಚಿಲ್ಲ. ಹಂಚಿದ್ರೂ ತಪ್ಪೇನಿಲ್ಲ. ನೀವು ಲಾಯರ್ ಆಲ್ವಾ? ಏನೂ ಆಗಲ್ಲ ಎಂದು ಹೇಳಿದ್ದಾರೆ. ಶಿವರಾಮೇಗೌಡ ಹೇಳಿಕೆಗೆ ಹಾಗೆ ಮಾಡುವುದು ಕಾನೂನು ಪ್ರಕಾರ ಶಿಕ್ಷೆ ಅಲ್ವೇ? ಹೆಣ್ಣುಮಕ್ಕಳ ಮಾನ ಮರ್ಯಾದೆ… ನಾವೂ ಯೋಚನೆ ಮಾಡಬೇಕು ಎಂದಿದ್ದಾರೆ. ಇದಕ್ಕೆ ನೀವ್ಯಾಕೆ ತಲೆಕೆಡಿಸಿಕೊಳ್ಳಬೆಕು? ಅಮಿತ್ ಶಾ ಚೆನ್ನೈನಲ್ಲಿ ಹೇಳಿದ್ದಾರಲ್ಲ ಹೆಣ್ಮಕ್ಕಳಿಗೆ ಕರ್ನಾಟಕ ಸುರಕ್ಷಿತ ತಾಣವಲ್ಲ ಅಂತಾ ಎಂದಿದ್ದಾರೆ. ಒಟ್ಟಾರೆ ಪೆನ್ ಡ್ರೈವ್ ಪ್ರಕರಣದ ಹೊಸ ಆಡಿಯೋ ರಾಜ್ಯ ರಾಜಕೀಯದಲ್ಲಿ ಮತ್ತೆ ಚರ್ಚೆಗೆ ಕಾರಣವಾಗಿದೆ.