ಸಿಂಗಾಪುರ: ಸಿಂಗಾಪುರದಲ್ಲಿ ಮತ್ತೊಂದು ಕೋವಿಡ್ ಅಲೆ ಆರಂಭವಾಗಿದ್ದು, ಒಂದು ವಾರದ ಅವಧಿಯಲ್ಲಿ 26 ಸಾವಿರಕ್ಕೂ ಅಧಿಕ ಪ್ರಕರಣಗಳು ವರದಿಯಾಗಿವೆ. ಈ ಹಿನ್ನೆಲೆಯಲ್ಲಿ ಮಾಸ್ಕ್ ಧರಿಸುವಂತೆ ಆರೋಗ್ಯ ಇಲಾಖೆ ವತಿಯಿಂದ ನಾಗರಿಕರಿಗೆ ಸಲಹೆ ನೀಡಲಾಗಿದೆ.
ನಾವು ಮತ್ತೊಂದು ಕೊರೋನಾ ಅಲೆಯ ಆರಂಭದಲ್ಲಿದ್ದೇವೆ. ಪ್ರಕರಣಗಳ ಸಂಖ್ಯೆ ಕ್ರಮೇಣ ಹೆಚ್ಚಾಗುತ್ತಿದೆ. ಮುಂದಿನ ಒಂದೆರಡು ವಾರಗಳಲ್ಲಿ ಕೋವಿಡ್ ಸೋಂಕು ಉತ್ತುಂಗಕ್ಕೆ ತಲುಪುವ ಸಾಧ್ಯತೆ ಇದೆ ಎಂದು ಆರೋಗ್ಯ ಸಚಿವ ಓಂಗ್ ಯೆ ಕುಂಗ್ ತಿಳಿಸಿದ್ದಾರೆ.
ಕಳೆದ ವಾರದಲ್ಲಿ 13,700 ಇದ್ದ ಪ್ರಕರಣಗಳ ಸಂಖ್ಯೆ ಒಂದೇ ವಾರದಲ್ಲಿ 26 ಸಾವಿರ ಗಡಿ ದಾಟಿದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮ ವಹಿಸಿದ್ದು, ಮಾಸ್ಕ್ ಧರಿಸುವಂತೆ ಸೂಚನೆ ನೀಡಲಾಗಿದೆ. ಆಸ್ಪತ್ರೆಗೆ ದಾಖಲಾಗುವವರ ಸರಾಸರಿ ಸಂಖ್ಯೆ ಕಳೆದ ವಾರ 181 ಇದ್ದು, ಈ ವಾರ 250ಕ್ಕೆ ಹೆಚ್ಚಳವಾಗಿದೆ ಎಂದು ಸಚಿವರು ಹೇಳಿದ್ದಾರೆ.