ಮೈಸೂರು: ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣದಲ್ಲಿ ಎರಡು ಭಾಗ ಇದೆ. ಒಂದು ಚಿತ್ರೀಕರಿಸಿದ ವಕ್ತಿ. ಎರಡನೇಯದು ಹಂಚಿದವರು. ಸರಿಯಾಗಿ ತನಿಖೆ ನಡೆಸಿದರೆ ಪ್ರಕರಣದ ಹಿಂದಿನ ದೊಡ್ಡ ತಿಮಿಂಗಿಲ ಯಾರೆಂದು ಗೊತಾಗುತ್ತದೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್.ಡಿ.ಕುಮಾರಸ್ವಾಮಿ, ಮೂಲ ವ್ಯಕ್ತಿಯನ್ನು ಹಿಡಿದರೆ ದೊಡ್ಡ ತಿಮಿಂಗಿಲ ಸಿಗುತ್ತದೆ. ಎಸ್ಐಟಿ ತನಿಖಾ ವರದಿ ಗೃಹ ಸಚಿವರಿಗೆ ಹೋಗುತ್ತಿಲ್ಲ. ಮಂಡ್ಯ ಶಾಸಕರಿಗೆ ಹೋಗುತ್ತಿದೆ. ಈ ಸರ್ಕಾರ ತಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳಲು ಹೋಗುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಕುಮಾರಸ್ವಾಮಿಯವರದ್ದು ಹಿಟ್ & ರನ್ ಕೇಸ್ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಕಿಡಿಕಾರಿದ ಕುಮಾರಸ್ವಾಮಿ, ಸಿದ್ದರಾಮಯ್ಯನವರಿಗೆ ಕ್ರಮಕೈಗೊಳ್ಳಲು ಧೈರ್ಯವಿದೆಯೇ? ದಾಖಲೆ ಕೊಡುತ್ತೇನೆ ನೀವು ಆಕ್ಷನ್ ತೆಗೆದುಕೊಳ್ಳುತ್ತೀರಾ? ಎಂದು ಪ್ರಶ್ನಿಸಿದ್ದಾರೆ.
ಇದೇ ವೇಳೆ ದೊಡ್ಡ ತಿಮಿಂಗಿಲ ಯಾರೆಂದು ಹೆಚ್.ಡಿ.ಕೆ.ಹೇಳಲಿ ಎಂಬ ಗೃಹ ಸಚಿವ ಪರಮೇಶ್ವರ್ ಹೇಳಿಕೆಗೂ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ದೊಡ್ಡ ತಿಮಿಂಗಿಲವನ್ನು ತಮ್ಮ ಪಕ್ಕದಲ್ಲೇ ಕೂರಿಸಿಕೊಂಡಿದ್ದಾರೆ. ಗೃಹ ಸಚಿವರು ತಮ್ಮ ಪಕ್ಕದಲ್ಲೇ ಕೂರಿಸಿಕೊಂಡಿದ್ದಾರೆ. ಸರಿಯಾಗಿ ತನಿಖೆ ಮಾಡಿದ್ರೆ ದೊಡ್ಡ ತಿಮಿಂಗಿಲದ ಬಗ್ಗೆ ಗೊತಾಗುತ್ತದೆ ಎಂದು ಹೇಳಿದರು.