ನವದೆಹಲಿ: ರಾಜ್ಯದ ಬಹುತೇಕ ಭಾಗದಲ್ಲಿ ಮುಂಗಾರು ಪೂರ್ವ ಮಳೆಯಾಗುತ್ತಿದ್ದು, ತಾಪಮಾನ ಇಳಿಕೆಯಾಗಿದೆ. ಇದರ ನಡುವೆಯೇ ಹವಾಮಾನ ಇಲಾಖೆ ಮತ್ತೊಂದು ಸಿಹಿ ಸುದ್ದಿ ನೀಡಿದೆ. ಪ್ರಸಕ್ತ ಸಾಲಿನ ಮುಂಗಾರು ಮಾರುತಗಳು ಜೂನ್ ಒಂದರಂದೇ ಕೇರಳಕ್ಕೆ ಪ್ರವೇಶಿಸಲಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮೇ 19 ರಂದು ನೈರುತ್ಯ ಮುಂಗಾರು ಮಾರುತ ದಕ್ಷಿಣ ಅಂಡಮಾನ್, ಬಂಗಾಳಕೊಲ್ಲಿಯ ಆಗ್ನೆಯ ಭಾಗ ಮತ್ತು ನಿಕೋಬಾರ್ ದ್ವೀಪಗಳನ್ನು ಪ್ರವೇಶಿಸಲಿದ್ದು, ಜೂನ್ 1ರ ವೇಳೆಗೆ ಕೇರಳಕ್ಕೆ ಪ್ರವೇಶಿಸುತ್ತವೆ. 15ರ ವೇಳೆಗೆ ದೇಶಾದ್ಯಂತ ಮುಂಗಾರು ಮಾರುತಗಳು ವ್ಯಾಪಿಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕೇರಳಕ್ಕೆ ಮುಂಗಾರು ಮಳೆ ಪ್ರವೇಶಿಸಿದ ಒಂದೆರಡು ದಿನಗಳಲ್ಲಿ ಕರ್ನಾಟಕದ ಕರಾವಳಿಗೂ ಪ್ರವೇಶಿಸಲಿದ್ದು ನಂತರ ರಾಜ್ಯದ್ಯಂತ ಮುಂಗಾರು ಮಳೆ ವಿಸ್ತರಿಸಲಿದೆ.