ಬೆಂಗಳೂರು: ಕಳೆದ ನಾಲ್ಕೈದು ದಿನಗಳಿಂದ ರಾಜ್ಯದ ವಿವಿಧ ಕಡೆ ಮಳೆಯಾಗುತ್ತಿದ್ದು, ತಾಪಮಾನದಲ್ಲಿ ಇಳಿಕೆಯಾಗಿದೆ. ರಾಯಚೂರು, ವಿಜಯಪುರ, ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ತಾಪಮಾನ ಕಡಿಮೆಯಾಗಿದೆ. ಸುಳಿಗಾಳಿಯಿಂದ ಮಳೆಯಾಗುತ್ತಿರುವುದರಿಂದ ಹಲವು ಜಿಲ್ಲೆಗಳಲ್ಲಿ ತಾಪಮಾನ ಕಡಿಮೆಯಾಗಿದೆ.
ರಾಜ್ಯದಲ್ಲಿ ಕನಿಷ್ಠ ಇನ್ನೂ ಒಂದು ವಾರ ಇದೆ ರೀತಿ ಮಳೆ ಮುಂದುವರೆಯುವ ಸಾಧ್ಯತೆ ಇದೆ. ಕರಾವಳಿ ಮತ್ತು ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಹೆಚ್ಚಿನ ಮಳೆ ಆಗಲಿದೆ. ಐದು ದಿನ ದಕ್ಷಿಣ ಒಳನಾಡಿನಲ್ಲಿ ಭಾರಿ ಮಳೆಯಾಗುವ ಸಂಭವ ಇದ್ದು ವಿವಿಧ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಎಚ್ಚರಿಕೆ ನೀಡಲಾಗಿದೆ. ಮಳೆಯ ಜೊತೆಗೆ ಗಾಳಿಯ ಪ್ರಮಾಣವು ಹೆಚ್ಚಾಗುತ್ತದೆ. ಗಂಟೆಗೆ 40 ರಿಂದ 50 ಕಿಲೋಮೀಟರ್ ವೇಗದ ಗಾಳಿ ಬೀಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಪೂರ್ವ ಮುಂಗಾರು ಮಳೆ ನಾಲ್ಕೈದು ದಿನ ಮುಂದುವರೆಯಲಿದೆ. ಮೇ 15ರಂದು ಶಿವಮೊಗ್ಗ, ಹಾಸನ, ಚಾಮರಾಜನಗರ, ಮುಂದಿನ ಎರಡು ದಿನ ಕೊಡಗು, ಮಂಡ್ಯ, ಮೈಸೂರಿನಲ್ಲಿ, ಮೇ 17 ರಿಂದ ಉಡುಪಿ, ದಕ್ಷಿಣ ಕನ್ನಡ ಭಾಗದಲ್ಲಿ ಹೆಚ್ಚಿನ ಮಳೆಯಾಗುವ ಸಂಭವ ಇದೆ. ಉತ್ತರ ಕನ್ನಡದಲ್ಲಿ ಮೇ 18 ಮತ್ತು 19ರಂದು ಹೆಚ್ಚಿನ ಮಳೆಯಾಗುವ ಕಾರಣ ಯೆಲ್ಲೋ ಅಲರ್ಟ್ ನೀಡಲಾಗಿದೆ. ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ, ದಕ್ಷಿಣ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಂಭವ ಇದೆ ಎಂದು ಹೇಳಲಾಗಿದೆ.