ಸೆಲಬ್ರಿಟಿಗಳು ಅದರಲ್ಲಂತೂ ನಟ- ನಟಿಯರೂ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವಾಗ ಪ್ರತಿಬಾರಿ ಬೇರೆ ಬೇರೆ ರೀತಿಯ ಔಟ್ ಫಿಟ್ ಧರಿಸುತ್ತಾರೆ. ಅದಕ್ಕಾಗಿ ಸಾಕಷ್ಟು ಹಣ ಮತ್ತು ಸಮಯ ವ್ಯಯಿಸುತ್ತಾರೆ.
ಆದರೆ ನೀವು ಗಮನಿಸಿರಬಹುದು ಖ್ಯಾತ ಉದ್ಯಮಿಗಳು, ವಿಐಪಿಗಳಾದ ಸ್ಟೀವ್ ಜಾಬ್ಸ್, ಮಾರ್ಕ್ ಜುಕರ್‌ಬರ್ಗ್ ಮತ್ತು ಬರಾಕ್ ಒಬಾಮಾ ಒಂದೇ ರೀತಿಯ ಉಡುಪನ್ನು ಆರಿಸಿಕೊಳ್ಳುತ್ತಾರೆ. ಸ್ಟೀವ್ ಜಾಬ್ಸ್ ಕಪ್ಪು ಟರ್ಟಲ್ ನೆಕ್ ಟಿ-ಶರ್ಟ್ ಅನ್ನು ಧರಿಸುತ್ತಾರೆ. ಮಾರ್ಕ್ ಜುಕರ್ ಬರ್ಗ್ ಬೂದು ಬಣ್ಣದ ಹೂಡಿಗೆ ಹೆಸರುವಾಸಿಯಾಗಿದ್ದಾರೆ.
ಜೊತೆಗೆ ಹೆಚ್ಚಾಗಿ ನೀಲಿ ಪ್ಯಾಂಟ್‌ನೊಂದಿಗೆ ಬೂದು ಬಣ್ಣದ ಟಿ ಶರ್ಟ್ ಗಳನ್ನು ಧರಿಸುತ್ತಾರೆ . ಅವರ ದಿನನಿತ್ಯದ ಉಡುಪಿನ ಹಿಂದೆ ಒಂದು ತಾರ್ಕಿಕ ಕಾರಣವಿದೆ. ಅದು ಅವರ ದೈನಂದಿನ ಜೀವನದಲ್ಲಿ ವ್ಯಾಪಾರ ನಿರ್ಮಾಣಕ್ಕೆ ಸಹಾಯ ಮಾಡುತ್ತದೆ.
ಆಲ್ಬರ್ಟ್ ಐನ್‌ಸ್ಟೈನ್ ಕೂಡ ಬೂದು ಬಣ್ಣದ ಸೂಟ್, ಬಿಳಿ ಶರ್ಟ್ ಮತ್ತು ಸ್ಲಿಪ್-ಆನ್ ಬೂಟುಗಳನ್ನು ಧರಿಸುತ್ತಿದ್ದರು. ಬರಾಕ್ ಒಬಾಮಾ ಕೂಡ ಏಕರೂಪದ ಶೈಲಿಯನ್ನು ಅನುಸರಿಸುತ್ತಾರೆ. ಈ ರೀತಿ ಒಂದೇ ರೀತಿಯ ಉಡುಪು ಧರಿಸುವುದು ಫ್ಯಾಷನ್ ಸಂಬಂಧಿತ ನಿರ್ಧಾರಗಳಲ್ಲಿ ತಮ್ಮ ಸಮಯವನ್ನು ಕಡಿಮೆ ಮಾಡಲು ಇದು ಅವರಿಗೆ ಸಹಾಯ ಮಾಡುತ್ತದೆ. ಹೀಗಾಗಿ ಅವರು ಯಾವ ರೀತಿ ಉಡುಪು ಧರಿಸಲಿ ಎಂದು ಗಂಟೆಗಟ್ಟಲೇ ಚಿಂತಿಸುವ ಬದಲು ಅದನ್ನು ವ್ಯಾಪಾರ- ವ್ಯವಹಾರದ ಕಡೆ ಗಮನ ಹರಿಸಲು ನೀಡಬಹುದು.
ಪ್ರತಿದಿನ ಒಂದೇ ರೀತಿಯ ಡ್ರೆಸ್ ಹಾಕುವುದರಿಂದ ಕೆಲಸದಲ್ಲಿ ಹೆಚ್ಚು ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲು ತನ್ನ ಮಾನಸಿಕ ಶಕ್ತಿಯನ್ನು ಉಳಿಸಲು ಅನುವು ಮಾಡಿಕೊಡುತ್ತದೆ ಎಂದು ಹೇಳಲಾಗುತ್ತದೆ.
ಸ್ಟೀವ್ ಜಾಬ್ಸ್ ಅವರ ಅಧಿಕೃತ ಜೀವನಚರಿತ್ರೆಯಲ್ಲಿ, “ನಾನು ಏನು ಧರಿಸಿದ್ದೇನೆ ಎಂಬುದರ ಕುರಿತು ನಿರ್ಧಾರಗಳನ್ನು ತೆಗೆದುಕೊಳ್ಳಲು ನಾನು ಬಯಸುವುದಿಲ್ಲ. ನಾನು ಒಂದೇ ರೀತಿಯ ಜೀನ್ಸ್ ಮತ್ತು ಟರ್ಟರ್ ನೆಕ್ ಟೀ ಶರ್ಟ್ ಹೊಂದಿದ್ದೇನೆ” ಎಂದಿದ್ದರು.
ಯಶಸ್ವಿ ವ್ಯಕ್ತಿಗಳು ಪ್ರತಿದಿನ ಒಂದೇ ರೀತಿಯ ಉಡುಪನ್ನು ಆಯ್ಕೆಮಾಡಲು ಕಾರಣವೆಂದರೆ ದೈನಂದಿನ ಆಯ್ಕೆಗಳ ಮಾನಸಿಕ ಹೊರೆಯನ್ನು ತಪ್ಪಿಸುವುದು. ಮಾನವನ ಮೆದುಳು ಒಂದು ದಿನದಲ್ಲಿ ಹಲವಾರು ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ ಎಂದು ಅಂದಾಜಿಸಲಾಗಿದೆ. ಹೆಚ್ಚಿನ ಆಯ್ಕೆಗಳನ್ನು ಮಾಡುವ ಹೊರೆಯನ್ನು ನಿರ್ಧಾರದ ಆಯಾಸ ಎಂದು ಕರೆಯಲಾಗುತ್ತದೆ, ಇದರರ್ಥ ನಿರಂತರ ನಿರ್ಧಾರ ತೆಗೆದುಕೊಳ್ಳುವಿಕೆಯಿಂದ ಉಂಟಾಗುವ ಮಾನಸಿಕ ಬಳಲಿಕೆ. ನಾವು ತೆಗೆದುಕೊಳ್ಳುವ ಹೆಚ್ಚಿನ ನಿರ್ಧಾರಗಳು ಹೆಚ್ಚು ಮಾನಸಿಕ ಶಕ್ತಿಯನ್ನು ತೆಗೆದುಕೊಳ್ಳುತ್ತದೆ.
ನೀವು ದೈನಂದಿನ ಆಯ್ಕೆಗಳನ್ನು ಸಾಧ್ಯವಾದಷ್ಟು ಸರಳವಾಗಿ ಇರಿಸಿದರೆ ಅದು ನಿಮ್ಮ ಮಾನಸಿಕ ಶಕ್ತಿಯನ್ನು ಹೆಚ್ಚು ಪರಿಣಾಮಕಾರಿಯಾಗಿ ನಿರ್ವಹಿಸಲು ಸಹಾಯ ಮಾಡುತ್ತದೆ ಎಂದು ತಜ್ಞರು ಸಲಹೆ ನೀಡುತ್ತಾರೆ. ಬರಾಕ್ ಒಬಾಮಾ, ಐನ್‌ಸ್ಟೈನ್, ಸ್ಟೀವ್ ಜಾಬ್ಸ್, ಮಾರ್ಕ್ ಜುಕರ್‌ಬರ್ಗ್ ಅವರಂತಹ ಅನೇಕ ಪ್ರತಿಭೆಗಳು ಈ ಆಯಾಸವನ್ನು ಕಡಿಮೆ ಮಾಡಲು ಮತ್ತು ಹೆಚ್ಚು ಮಹತ್ವದ ಸಾಧನೆಗಳಿಗಾಗಿ ತಮ್ಮ ಮನಸ್ಸನ್ನು ಮುಕ್ತಗೊಳಿಸಲು ಈ ತಂತ್ರವನ್ನು ಬಳಸುತ್ತಾರೆ.