ಉತ್ತರ ಪ್ರದೇಶದ ಆಗ್ರಾದ ಮಹಿಳೆಯೊಬ್ಬಳು ಕೇವಲ 5 ರೂಪಾಯಿಯ ಕುರ್ಕುರೆಗಾಗಿ ಗಂಡನಿಂದ ವಿಚ್ಛೇದನ ಕೋರಿದ್ದಾಳೆ. ಆಕೆಗೆ ಪ್ರತಿದಿನ ಕುರ್ಕುರೆ ತಿನ್ನುವ ಅಭ್ಯಾಸವಿತ್ತು. ಪತಿ ದಿನನಿತ್ಯ ಕೆಲಸ ಮುಗಿಸಿಕೊಂಡು ಬರುವ ಸಂದರ್ಭದಲ್ಲಿ 5 ರೂಪಾಯಿ ಮೌಲ್ಯದ ಕುರ್ಕುರೆ ಪ್ಯಾಕೆಟ್ ತರುತ್ತಿದ್ದ.
ಒಮ್ಮೆ ಆತ ಕುರ್ಕುರೆ ತರುವುದನ್ನು ಮರೆತುಬಿಟ್ಟಿದ್ದಾನೆ. ಇದೇ ವಿಚಾರಕ್ಕೆ ಗಂಡ ಹೆಂಡತಿ ನಡುವೆ ಶುರುವಾದ ಜಗಳ ತೀವ್ರ ಸ್ವರೂಪ ಪಡೆದಿದೆ. ತನ್ನಿಷ್ಟದ ಕುರ್ಕುರೆ ತಂದಿಲ್ಲ ಎಂಬ ಕಾರಣಕ್ಕೆ ಕೋಪ ಮಾಡಿಕೊಂಡ ಮಹಿಳೆ ಪತಿಯನ್ನು ತೊರೆದು ತನ್ನ ಪೋಷಕರ ಮನೆಗೆ ಹೋಗಿದ್ದಾಳೆ.
ಅಷ್ಟಕ್ಕೇ ಸುಮ್ಮನಾಗದ ಆಕೆ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದಾಳೆ. ಇವರಿಬ್ಬರೂ ಕಳೆದ ವರ್ಷವಷ್ಟೇ ವಿವಾಹವಾಗಿದ್ದರು. ಸದ್ಯ ಈ ಜೋಡಿಯನ್ನು ಆಗ್ರಾದ ಶಹಗಂಜ್ ಪೊಲೀಸರು ಕುಟುಂಬ ಸಮಾಲೋಚನೆಗಾಗಿ ಕಳುಹಿಸಿದ್ದಾರೆ. ಕುರ್ಕುರೆ ತಿನ್ನುವ ಪತ್ನಿಯ ಅಭ್ಯಾಸದಿಂದ ಮನನೊಂದಿದ್ದ ಪತಿ ತಮ್ಮ ನಡುವೆ ಜಗಳಕ್ಕೆ ಅದೇ ಕಾರಣವಾಗಿತ್ತು ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಮತ್ತೊಂದೆಡೆ ಪತಿ ತನ್ನ ಮೇಲೆ ಹಲ್ಲೆ ಮಾಡಿದ್ದಾನೆಂದು ಮಹಿಳೆ ಆರೋಪಿಸಿದ್ದಾಳೆ. ಅಸಲಿಗೆ ಇಬ್ಬರ ಮಧ್ಯೆ ಏನು ನಡೆದಿದೆ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.