ಬೆಂಗಳೂರು: ಕೆಎಎಸ್ ಅಧಿಕಾರಿ ಶಿವಕುಮಾರ್ ಅವರ ಪತ್ನಿ, ವಕೀಲೆ ಚೈತ್ರಾ ಗೌಡ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನ ಸಂಜಯ್ ನಗರ ಮನೆಯಲ್ಲಿ ನಡೆದಿದೆ.
ಚೈತ್ರಾ ಗೌಡ ಬೆಡ್ ರೂಮ್ ನಲ್ಲಿಯೆ ನೇಣಿಗೆ ಕೊರಳೊಡ್ಡಿದ್ದಾರೆ. ಆರಂಭದಲ್ಲಿ ಮನೆಯಲ್ಲಿ ಯಾವುದೇ ಡೆತ್ ನೋಟ್ ಪತ್ತೆಯಾಗಿಲ್ಲ ಎನ್ನಲಾಗಿತ್ತು. ಆದರೆ ಪೊಲೀಸರು ತೀವ್ರ ಶೋಧ ನಡೆಸಿದ ಬಳಿಕ ಅವರು ಬರೆದಿಟ್ಟಿದ್ದ ಡೈರಿಯಲ್ಲಿ ಡೆತ್ ನೋಟ್ ಪತ್ತೆಯಾಗಿದ್ದು, ಆತ್ಮಹತ್ಯೆ ನಿರ್ಧಾರದ ಕಾರಣವನ್ನು ಉಲ್ಲೇಖಿಸಿದ್ದಾರೆ.
ಈ ಬಗ್ಗೆ ಡಿಸಿಪಿ ಸೈದಬೈಲು ಅದಾವತ್ ತಿಳಿಸಿದ್ದು, ಮಾರ್ಚ್ 11ರಂದೇ ಚೈತ್ರಾ ಗೌಡ ಈ ಡೆತ್ ನೋಟ್ ಬರೆದಿಟ್ಟಿದ್ದರು ಎನ್ನಲಾಗಿದೆ. ನನ್ನ ಸಾವಿಗೆ ಯರೂ ಕಾರಣವಲ್ಲ ಎಂದು ಬರೆದಿದ್ದಾರೆ. ಅದನ್ನು ಅವರೇ ಬರೆದಿದ್ದಾರಾ ಎಂದು ಪರುಶೀಲಿಸಲಾಗುತ್ತಿದೆ. ತನಿಖೆ ಬಳಿಕ ವಿಚಾರ ಸ್ಪಷ್ಟವಾಗಿ ಗೊತ್ತಾಗಲಿದೆ ಎಂದು ತಿಳಿಸಿದ್ದಾರೆ.
ಮಾರ್ಚ್ 11 ರಂದು ಬರೆದಿದ್ದಾರೆ ಎನ್ನಲಾದ ಡೆತ್ ನೋಟ್ ನಲ್ಲಿ ನನ್ನ ಗಂಡ ಒಳ್ಳೆಯವರು. ನನ್ನನ್ನು ಚನ್ನಾಗಿ ನೋಡಿಕೊಂಡಿದ್ದಾರೆ. ನನ್ನ ಸಾವಿಗೆ ಯಾರೂ ಕಾರಣವಲ್ಲ. ಆದರೆ ನಾನು ಜೀವನವನ್ನು ಕೊನೆಗೊಳಿಸಿಕೊಳ್ಳಲು ನಿರ್ಧರಿಸಿದ್ದೇನೆ. ನಾನು ಡಿಪ್ರೆಶನ್ ನಿಂದ ಬಳಲುತ್ತಿದ್ದೇನೆ . ಡಿಪ್ರೆಶನ್ ನಿಂದ ಹೊರಬರಲು ಸಾಕಷ್ಟು ಪ್ರಯತ್ನಿಸಿದೆ. ಆದರೂ ಸಾಧ್ಯವಾಗುತ್ತಿಲ್ಲ. ಹಾಗಾಗಿ ಜೀವನ ಎಂಡ್ ಮಾಡಿಕೊಳ್ಳುತ್ತಿದ್ದೇನೆ. ಆತ್ಮಹತ್ಯೆ ತಪ್ಪು ಎಂದು ಗೊತ್ತು. ಆದರೂ ಜೀವನ ಅಂತ್ಯಗೊಳಿಸಿಕೊಳ್ಳಲು ತೀರ್ಮಾನಿಸಿದ್ದೇನೆ. ಮಗುವನ್ನು ನೋಡಿಕೊಂಡು ಜೀವನ ಎಂಜಾಯ್ ಮಾಡಿ ಎಂದು ಬರೆದಿಟ್ಟಿದ್ದಾರೆ.
ವಕೀಲೆ ಹಾಗೂ ಪತ್ನಿ ಚೈತ್ರಾ ಡಿಪ್ರೆಶನ್ ನಿಂದ ಬಳಲುತ್ತಿದ್ದರೂ ಪತಿಗೆ ಈ ಬಗ್ಗೆ ಗೊತ್ತಾಗಲಿಲ್ಲವೇ? ಅಥವಾ ಚೈತ್ರಾ ಗೌಡ ಡಿಪ್ರೆಶನ್ ನಿಂದ ಹೊರಬರಲು ಯಾವುದೇ ಟ್ರೀಟ್ ಮೆಂಟ್ ತೆಗೆದುಕೊಂಡಿರಲಿಲ್ಲವೇ? ಮೂರು ತಿಂಗಳ ಹಿಂದೆಯೇ ಚೈತ್ರಾ ಆತ್ಮಹತ್ಯೆಗೆ ನಿರ್ಧರಿಸಿ ಡೆತ್ ನೋಟ್ ಬರೆದಿಟ್ಟಿದ್ದು ಈ ಬಗ್ಗೆ ಸಣ್ಣ ಸುಳಿವೂ ಯಾರಿಗೂ ಇರಲಿಲ್ಲವೇ ಎಂಬ ಹಲವು ಪ್ರಶ್ನೆಗಳು ಮೂಡಿವೆ.