ಕೊಡಗು: ಕೊಡಗು ಜಿಲ್ಲೆಯ ಸೂರ್ಲಬ್ಬಿ ಗ್ರಾಮದಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿನಿಯ ರುಂಡ ಕತ್ತರಿಸಿ ಬರ್ಬರವಾಗಿ ಹತ್ಯೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ದಿನಗಳ ಬಳಿಕ ವಿದ್ಯಾರ್ಥಿನಿಯ ರುಂಡ ಪತ್ತೆಯಾಗಿದೆ.
ನಿಶ್ಚಿತಾರ್ಥ ನಿಲ್ಲಿಸಿದ್ದಕ್ಕೆ ಪ್ರಕಾಶ್ ಅಲಿಯಾಸ್ ಓಂಕಾರಪ್ಪ ಎಂಬಾತ ಎಸ್.ಎಸ್.ಎಲ್ ಸಿ ವಿದ್ಯಾರ್ಥಿನಿ ಮೀನಾಳ ರುಂಡ ಕತ್ತರಿಸಿ ಹತ್ಯೆಗೈದು ಪರಾರಿಯಾಗಿದ್ದ. ಹಮ್ಮಿಯಾಲ ಗ್ರಾಮದ ಗುಡ್ದಪ್ರದೇಶದಲ್ಲಿ ಅಡಗಿ ಕುಳಿತಿದ್ದ ಆರೋಪಿ ಪ್ರಕಾಶ್ ಅಲಿಯಾಸ್ ಓಂಕಾರಪ್ಪನನ್ನು ಇಂದು ಪೊಲೀಸರು ಬಂಧಿಸಿದ್ದರು. ಮೃತ ಮೀನಾಳ ರುಂಡವನ್ನು ಸೂರ್ಲಬ್ಬಿಯ ಬೆಟ್ಟ ಪ್ರದೇಶದಲ್ಲಿ ಎಸೆದಿರುವುದಾಗಿ ಆರೋಪಿ ಹೇಳಿಕೆ ನೀಡಿದ್ದ.
ಮೀನಾಳ ರುಂಡವನ್ನು ಹುಡುಕಾಡುತ್ತಿದ್ದ ಪೊಲೀಸರಿಗೆ ಮೀನಾ ಹತ್ಯೆಯಾದ ಜಾಗದಿಂದ 300 ಮೀಟರ್ ದೂರದಲ್ಲಿ ಪೊದೆಯಲ್ಲಿ ಆಕೆಯ ರುಂಡ ಪತ್ತೆಯಾಗಿದೆ.
ಎಸ್.ಎಸ್.ಎಲ್.ಸಿ ವಿದ್ಯಾರ್ಥಿನಿ ಮೀನಾಳನ್ನು ಫಲಿತಾಂಶ ಬಂದ ದಿನವೇ ಆರೋಪಿ ಪ್ರಕಾಶ್ ಬರ್ಬರವಾಗಿ ಹತ್ಯೆ ಮಾಡಿದ್ದ. ಮೇ 9ರಂದು ಮೀನಾಳ ಜೊತೆ ಪ್ರಕಾಶ್ ನಿಶ್ಚಿತಾರ್ಥವಿತ್ತು. ಆದರೆ ಅಪ್ರಾಪ್ತ ಬಾಲಕಿ ಜೊತೆ ನಿಶ್ಚಿತಾರ್ಥ ವಿಷಯ ತಿಳಿದ ಪೊಲೀಸರು ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ನಿಶ್ಚಿತಾರ್ಥ ನಿಲ್ಲಿಸಿದ್ದರು. ಬಾಲಕಿಗೆ 18 ವರ್ಷವಾಗುವವರೆಗೆ ಮದುವೆ ಮಾಡುವಂತಿಲ್ಲ ಎಂದು ತಿಳಿಸಿದ್ದರು. ಇದೇ ಕಾರಣಕ್ಕೆ ಪ್ರಕಾಶ್, ಮೀನಾಳನ್ನು ಹತ್ಯೆ ಮಾಡಿರಬಹುದು ಎಂದು ಶಂಕಿಸಲಾಗಿದ್ದು, ತನಿಖೆಯಿಂದಷ್ಟೇ ಸತ್ಯ ಹೊರಬರಬೇಕಿದೆ.