ಬಿರು ಬೇಸಿಗೆಯಿಂದ ಕಂಗೆಟ್ಟಿದ್ದ ರಾಜ್ಯದ ಜನತೆಗೆ ಕಳೆದ ಕೆಲವು ದಿನಗಳಿಂದ ವರುಣ ತಂಪೆರೆಯುತ್ತಿದ್ದಾನೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲೂ ಸಹ ಉತ್ತಮ ಮಳೆಯಾಗುತ್ತಿದ್ದು, ಮೇ 12ರ ವರೆಗೂ ಮುಂದವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅಲ್ಲದೆ ಆ ಬಳಿಕವೂ ಸಹ ಬೆಂಗಳೂರು ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ತಿಳಿಸಿದೆ.
ಇನ್ನು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸ್ವಲ್ಪ ಮಳೆ ಬಂದರೆ ಸಾಕು ಮರಗಳು ಬೀಳುವುದು, ಸಂಚಾರ ಅಸ್ತವ್ಯಸ್ತವಾಗುವುದರ ಜೊತೆಗೆ ರಾಜ ಕಾಲುವೆಗಳು ತುಂಬಿ ತಗ್ಗು ಪ್ರದೇಶಗಳ ಮನೆಗಳಿಗೆ ನೀರು ನುಗ್ಗಿ ದೊಡ್ಡ ಆವಾಂತರವೇ ಸೃಷ್ಟಿಯಾಗುತ್ತಿತ್ತು. ಹೀಗಾಗಿ ಈ ಬಾರಿ ಮಹಾನಗರ ಪಾಲಿಕೆ, ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲು ಮುಂದಾಗಿದೆ.
ರಾಜ ಕಾಲುವೆಗಳ ಸ್ವಚ್ಛಗೊಳಿಸುವ ಕಾರ್ಯಕ್ಕೆ ಮಹಾನಗರ ಪಾಲಿಕೆ ಮುಂದಾಗಿದ್ದು, ಆದರೆ ಸಾರ್ವಜನಿಕರು ಕಸ ಎಸೆಯುತ್ತಿರುವುದು ತಲೆ ನೋವಾಗಿ ಪರಿಣಮಿಸಿದೆ. ಅಲ್ಲದೆ ಕಟ್ಟಡದ ತ್ಯಾಜ್ಯ ಸಹ ರಾಜ ಕಾಲುವೆಗೆ ಬಂದು ಸೇರುತ್ತಿದೆ. ಇದಕ್ಕೆ ಕಡಿವಾಣ ಹಾಕಲು ಈಗ ಪಾಲಿಕೆ ಮುಂದಾಗಿದ್ದು, ನಿಗಾ ವಹಿಸಲು ಮಾರ್ಷಲ್ ಗಳ ನೇಮಕಕ್ಕೆ ತೀರ್ಮಾನಿಸಿದೆ. ಅಲ್ಲದೆ ಕಸ ಎಸೆಯುವವರ ಹಾಗೂ ಕಟ್ಟಡ ತ್ಯಾಜ್ಯ ಸುರಿಯುತ್ತಿರುವವರಿಗೆ ದಂಡ ವಿಧಿಸಲು ಸಹ ಸಿದ್ಧತೆ ನಡೆಸಿದೆ.