
ತನ್ನ ಮಗನ ಜೊತೆ ಈ ಬಾರಿಯ ಎಸ್ ಎಸ್ ಎಲ್ ಸಿ ಪರೀಕ್ಷೆಯನ್ನು ಬರೆದಿದ್ದ ಹಾಸನ ಜಿಲ್ಲೆ ಆಲೂರು ತಾಲೂಕಿನ ಮಹಿಳೆಯೊಬ್ಬರು ಪಾಸ್ ಆಗಿದ್ದಾರೆ. ತಾಯಿ – ಮಗ ಇಬ್ಬರೂ ಒಟ್ಟಿಗೆ ಉತ್ತೀರ್ಣರಾಗಿರುವುದು ಕುಟುಂಬ ಸದಸ್ಯರ ಸಂತಸವನ್ನು ಇಮ್ಮಡಿಗೊಳಿಸಿದೆ.
ಚಿನ್ನಳ್ಳಿಯ ಟಿ.ಆರ್. ಜ್ಯೋತಿ ಮತ್ತು ಅವರ ಮಗ ಸಿ.ಬಿ. ನಿತಿನ್ ಒಟ್ಟಿಗೆ ಹತ್ತನೇ ತರಗತಿ ಪರೀಕ್ಷೆ ಬರೆದಿದ್ದು, ಸಕಲೇಶಪುರ ತಾಲೂಕು ಬಾಳ್ಳುಪೇಟೆ ಸಿದ್ದಣ್ಣಯ್ಯ ಹೈಸ್ಕೂಲ್ ನಲ್ಲಿ ಪುನರಾವರ್ತಿತ ಅಭ್ಯರ್ಥಿಯಾಗಿ ಪರೀಕ್ಷೆ ಬರೆದಿದ್ದ ಜ್ಯೋತಿ ಅವರು 250 ಅಂಕ ಗಳಿಸಿ ತೇರ್ಗಡೆಯಾಗಿದ್ದಾರೆ. ಬಾಳ್ಳುಪೇಟೆ ವಿವೇಕ ವಿದ್ಯಾಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಜ್ಯೋತಿ ಅವರ ಮಗ ನಿತಿನ್ 625 ಕ್ಕೆ 582 ಅಂಕ ಗಳಿಸಿ ತೇರ್ಗಡೆಯಾಗಿದ್ದಾರೆ.
ತಮ್ಮ ಗ್ರಾಮದಲ್ಲಿ ಹಾಲಿನ ಡೈರಿ ತೆರೆಯಬೇಕೆಂಬ ಉದ್ದೇಶದಿಂದ ಜ್ಯೋತಿ ಅವರು 10ನೇ ತರಗತಿ ಪರೀಕ್ಷೆ ಬರೆದಿದ್ದು, ಎರಡನೇ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದಾರೆ. ಇದೀಗ ಅವರು ಪಿಯುಸಿ ಪರೀಕ್ಷೆ ಬರೆಯಲು ತಯಾರಿ ನಡೆಸುತ್ತಿದ್ದಾರೆ.