”ಅತಿಥಿ ದೇವೋಭವ’’ ಸಂಸ್ಕೃತದ ಈ ಮಾತು ನಮ್ಮ ಸಮಾಜದ ಸಂಸ್ಕೃತಿ. ಆದ್ರೆ ಇತ್ತೀಚಿನ ದಿನಗಳಲ್ಲಿ ಇದನ್ನು ಜನರು ಹೊರೆ ಎಂದುಕೊಳ್ಳುತ್ತಿದ್ದಾರೆ. ಆಧುನಿಕತೆ ಹೆಸರಿನಲ್ಲಿ ಅತಿಥಿ ಸತ್ಕಾರವನ್ನು ಮರೆಯುತ್ತಿದ್ದಾರೆ. ಆದ್ರೆ ಅತಿಥಿ ಸತ್ಕಾರದಿಂದ ಸಾಕಷ್ಟು ಲಾಭವಿದೆ. ಮನೆಗೆ ಬರುವ ಅತಿಥಿ ಪಾಪವನ್ನು ತೆಗೆದುಕೊಂಡು ಹೋಗ್ತಾನೆ. ಪುಣ್ಯವನ್ನು ಮನೆಯವರಿಗೆ ನೀಡಿ ಹೋಗ್ತಾನೆ ಎಂಬ ನಂಬಿಕೆ ಇದೆ.
ಮೊದಲು ಮನೆಗೆ ಬರುವ ಅತಿಥಿಯನ್ನು ಗೌರವಿಸಿ. ಇದರಲ್ಲಿ ನಮ್ಮ ಸಂಸ್ಕಾರ ಹಾಗೂ ಸತ್ಯ ಕೂಡ ಇದೆ. ಭಾರತದಲ್ಲಿ ಪ್ರಾಚೀನ ಕಾಲದಿಂದಲೂ ಮನೆಗೆ ಬರುವ ಅತಿಥಿಗಳನ್ನು ದೇವರಂತೆ ಸತ್ಕರಿಸಿ ಕಳುಹಿಸುವ ಪದ್ಧತಿ ಇದೆ. ಮನೆಗೆ ಬರುವ ಅತಿಥಿಗೆ ಊಟ ಬಡಿಸುವುದು ಪದ್ಧತಿಯ ಒಂದು ಭಾಗ. ಅತಿಥಿಯ ಗೌರವ, ಸತ್ಕಾರಕ್ಕೆ ಸಂಬಂಧಿಸಿದಂತೆ ಶಿವಪುರಾಣದಲ್ಲಿ ಕೆಲವೊಂದು ಮಹತ್ವದ ವಿಷಯಗಳನ್ನು ಹೇಳಲಾಗಿದೆ.
ಮನೆಗೆ ಬರುವ ಅತಿಥಿಯನ್ನು ಖುಷಿಯಿಂದ, ನಗು ಮುಖದಿಂದ ಸ್ವಾಗತಿಸಿ. ಕುಳಿತುಕೊಳ್ಳಲು ಸೂಕ್ತವಾದ ಸ್ಥಳ ನೀಡಿ. ಅವರಿಗೆ ನೀರು-ಪಾನೀಯ ನೀಡುವ ವೇಳೆ ಮನಸ್ಸಿನಲ್ಲಿ ಕೋಪ, ದ್ವೇಷ, ಅಸೂಯೆ ಇರಬಾರದು.
ಮನೆಗೆ ಬರುವ ಅತಿಥಿ ಖುಷಿಯಾಗುವಂತೆ ಮನೆಯನ್ನು ಸ್ವಚ್ಛವಾಗಿಡಿ. ನಿಮ್ಮ ಕೋಪವನ್ನು ಹಿಡಿದಿಟ್ಟುಕೊಳ್ಳಿ. ಅತಿಥಿಗಳ ಮುಂದೆ ನಿಮ್ಮ ಜಗಳ-ಕೋಪವನ್ನು ತೋರಿಸಬೇಡಿ.
ಮಧುರವಾದ ಭಾಷೆಯಲ್ಲಿ ಅವರ ಜೊತೆ ಮಾತನಾಡಿ. ಅವರಿಗೆ ಅಪಮಾನವಾಗುವಂತೆ ಮಾತನಾಡಬೇಡಿ. ಕೆಟ್ಟ ಶಬ್ಧಗಳಿಂದ ನಿಂದನೆ ಮಾಡಬೇಡಿ. ಅವರಿಗೆ ಬೇಸರವಾಗುವಂತೆ ನಡೆದುಕೊಳ್ಳಬೇಡಿ. ಶುದ್ಧ ತನು-ಮನದಲ್ಲಿ ಅತಿಥಿಗಳ ಸೇವೆ ಮಾಡಿ. ಮನೆಗೆ ಬಂದ ಅತಿಥಿ ವಾಪಸ್ ಹೋಗುವ ವೇಳೆ ಅವರಿಗೆ ಸಣ್ಣದಿರಲಿ, ಚಿಕ್ಕದಿರಲಿ ಉಡುಗೊರೆಯನ್ನು ನೀಡಿ.