ಬೆಂಗಳೂರು: ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಇದೇ ವಿಚಾರವಾಗಿ ಮಾತನಾಡಿರುವ ವಿಪಕ್ಷ ನಾಯಕ ಆರ್.ಅಶೋಕ್ ಪೆನ್ ಡ್ರೈವ್ ಬಿಡುಗಡೆ ಹಿಂದೆ ತ್ರಿಬಲ್ S ಕೈವಾಡವಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಆರ್.ಅಶೋಕ್, ಪೆನ್ ಡ್ರೈವ್ ಬಿಡುಗಡೆಯ ಪ್ರಮುಖ ರೂವಾರಿಗಳೇ ತ್ರಿಬಲ್ S. ಪ್ರಕರಣದ ತನಿಖೆಗೆ ರಚನೆಯಾಗಿರುವುದು ಎಸ್ಐಟಿ ಅಲ್ಲ SSSIT ಎಂದು ಕಿಡಿಕಾರಿದ್ದಾರೆ.
ಪೆನ್ ಡ್ರೈವ್ ವೈರಲ್ ಆಗಿರುವುದರ ಹಿಂದೆ ಇರುವ ತ್ರಿಬಲ್ S ಅಂದರೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲಾ, ಡಿಸಿಎಂ ಡಿ.ಕೆ.ಶಿವಕುಮಾರ್, ಸಿಎಂ ಸಿದ್ದರಾಮಯ್ಯ. ಪ್ರಕರಣದ ತನಿಖೆಗೆ ರಚನೆಯಾಗಿರುವುದು ಇದೇ ಎಸ್ ಎಸ್ ಎಸ್ ಐಟಿ ತಂಡ. ಸುರ್ಜೇವಾಲಾ ಈ ಪ್ರಕರಣದ ಸ್ಕ್ರಿಪ್ಟ್ ರೈಟರ್, ಇದರ ಡೈರೆಕ್ಟರ್ ಸಿದ್ದರಾಮಯ್ಯ ಹಾಗೂ ಪ್ರೊಡ್ಯೂಸರ್ ಡಿ.ಕೆ.ಶಿವಕುಮಾರ್ ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ನಾಯಕರು ಜೆಡಿಎಸ್ ಮುಗಿಸಲು ಸಂಚು ರೂಪಿಸಿದ್ದಾರೆ. ಇದೇ ಉದ್ದೇಶದಿಂದ ಪ್ರತಿದಿನ ಸಂಪುಟ ಮಟ್ಟದಲ್ಲಿಯೂ ಸಭೆ ನಡೆಸುತ್ತಿದ್ದಾರಂತೆ. ಯಾವರೀತಿ ಪ್ಲಾನ್ ಮಾಡಬೇಕು ಎಂಬ ಬಗ್ಗೆ ಚರ್ಚೆ ನಡೆಸಲಾಗುತ್ತಿದೆಯಂತೆ ಎಂದು ಆರೋಪಿಸಿದ್ದಾರೆ.
ಲಕ್ಷಗಟ್ಟಲೆ ಪೆನ್ ಡ್ರೈವ್ ರೆಡಿಮಾಡಿಸಿದ್ದಾರೆ ಎಂಬ ಮಾಹಿತಿ ಇದೆ. ಅಷ್ಟೊಂದು ಪೆನ್ ಡ್ರೈವ್ ತಯಾರಿಸಲು, ಹಂಚಲು ದುಡ್ಡು ಎಲ್ಲಿಂದ ಬಂತು? ಯಾರು ಕೊಡ್ತಾರೆ? ಕಾಂಗ್ರೆಸ್ ಮನೆಹಾಳು ಪಾರ್ಟಿ. ಹೆಣ್ಣುಮಕ್ಕಳ ಮಾನ ಮರ್ಯಾದೆಯನ್ನು ವಿಶ್ವಮಟ್ಟದಲ್ಲಿ ಹರಾಜು ಹಾಕಿದ್ದಾರೆ. ಈ ಪಾಪದಿಂದಾಗಿಯೇ ರಾಜ್ಯದಲ್ಲಿ ಕಾಂಗ್ರೆಸ್ ನಾಶವಾಗಲಿದೆ ಎಂದು ಕಿಡಿಕಾರಿದರು.
ಇದೇ ವೇಳೆ ಎಲ್ ಆರ್.ಶಿವರಾಮೇಗೌಡ ವಿರುದ್ಧ ಗುಡುಗಿದ ಆರ್.ಅಶೋಕ್, ಶಿವರಾಮೇಗೌದ ಯಾವ ಪಕ್ಷದಲ್ಲಿದ್ದಾರೆ ಎಂಬುದು ಗೊತ್ತಿಲ್ಲ. ಕಾಂಗ್ರೆಸ್ ನಲ್ಲಿ 5 ಬಾರಿ ಸೇರಿದ್ದಾರೆ. ಬಿಜೆಪಿ 5 ಬಾರಿ ಸೇರಿದ್ದಾರೆ. ಜನತಾದಳಕ್ಕೂ 5 ಬಾರಿ ಸೇರಿದ್ದಾರೆ. ಹಾಗಾಗಿ ಅವರು ಯಾವ ಪಾರ್ಟಿಯಲ್ಲಿದ್ದಾರೆ ಅಂತಾ ನನಗಂತೂ ಗೊತ್ತಿಲ್ಲ. ಅವರು ಬಿಜೆಪಿಯಲ್ಲಿದ್ರೆ ಡಿಕೆಶಿ ಮನೆಗೆ ಯಾಕೆ ಹೋಗ್ಬೇಕು? ಯಾವ ಪಕ್ಷದಲ್ಲಿದ್ದಾರೆ ಗೊತ್ತಿಲ್ಲ ಎಂದು ಕಿಡಿಕಾರಿದರು.