ಬೆಂಗಳೂರು: ಲೋಕಸಭೆ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಮೇ 7 ರಂದು ಮತದಾನ ನಡೆಯಲಿದ್ದು, ಚುನಾವಣಾ ಗುರುತಿನ ಚೀಟಿ(ಎಪಿಕ್ ಕಾರ್ಡ್) ಹಾಗೂ ಭಾರತ ಚುನಾವಣಾ ಆಯೋಗ ನಿಗದಿಪಡಿಸಿರುವ ಪರ್ಯಾಯ ದಾಖಲೆಗಳಲ್ಲಿ ಯಾವುದಾದರೂ ಒಂದನ್ನು ಹಾಜರುಪಡಿಸಿ ಮತ ಚಲಾಯಿಸಲು ಅವಕಾಶ ಕಲ್ಪಿಸಲಾಗಿದೆ.
ಮತದಾರರು ಮತ ಚಲಾಯಿಸಲು ಮತಗಟ್ಟೆಗಳಿಗೆ ಹೋದ ಸಂದರ್ಭದಲ್ಲಿ ಅವರು ಹೊಂದಿರುವ ಮತದಾರರ ಭಾವಚಿತ್ರವುಳ್ಳ ಗುರುತಿನ ಚೀಟಿಯನ್ನು ಹಾಜರುಪಡಿಸಬೇಕು. ಒಂದು ವೇಳೆ ಅದನ್ನು ಹಾಜರುಪಡಿಸಲು ಸಾಧ್ಯವಿಲ್ಲದಿದ್ದಲ್ಲಿ ಈ ಕೆಳಕಂಡ ಯಾವುದಾದರೂ ಒಂದು ಪರ್ಯಾಯ ದಾಖಲಾತಿಯನ್ನು ಮತದಾರರನ್ನು ಗುರುತಿಸುವುದಕ್ಕಾಗಿ ಹಾಜರುಪಡಿಸಬಹುದಾಗಿದೆ.
ದಾಖಲೆಗಳು:
ಆಧಾರ್ ಕಾರ್ಡ್
ಎಂಎನ್‍ಆರ್‍ಇಜಿಎ ಜಾಬ್ ಕಾರ್ಡ್
ಬ್ಯಾಂಕ್, ಅಂಚೆ ಕಚೇರಿ ನೀಡಿದ ಭಾವಚಿತ್ರವಿರುವ ಪಾಸ್ ಬುಕ್ ಗಳು
ಕಾರ್ಮಿಕ ಸಚಿವಾಲಯದ ಯೋಜನೆಯಡಿ ನೀಡಲಾದ ಆರೋಗ್ಯ ವಿಮಾ ಸ್ಮಾರ್ಟ್ ಕಾರ್ಡ್
ಡ್ರೈವಿಂಗ್ ಲೈಸನ್ಸ್
ಪಾನ್ ಕಾರ್ಡ್
ಎನ್‍ಪಿಆರ್ ಅಡಿಯಲ್ಲಿ ಆರ್.ಬಿ.ಐ. ನೀಡಿದ ಸ್ಮಾರ್ಟ್ ಕಾರ್ಡ್
ಭಾರತೀಯ ಪಾಸ್‍ಫೋರ್ಟ್
ಭಾವಚಿತ್ರದೊಂದಿಗೆ ಪಿಂಚಣಿ ದಾಖಲೆ
ರಾಜ್ಯ, ಕೇಂದ್ರ ಸರ್ಕಾರದ ಸಾರ್ವಜನಿಕ ಉದ್ದಿಮೆಗಳು ತಮ್ಮ ನೌಕರರಿಗೆ ನೀಡಿರುವ ಸೇವಾ ಗುರುತಿನ ಚೀಟಿ
ಸಂಸದರು, ವಿಧಾನಸಭಾ ಸದಸ್ಯರು, ವಿಧಾನ ಪರಿಷತ್ ಸದಸ್ಯರುಗಳಿಗೆ ನೀಡಿರುವ ಅಧಿಕೃತ ಗುರುತಿನ ಚೀಟಿಗಳು
ಅಂಗವಿಕಲರ ಗುರುತಿನ ಚೀಟಿ(ಯುಡಿಐಡಿ ಕಾರ್ಡ್) ಪತ್ರದ ಮೂಲ ಪ್ರತಿಗಳನ್ನು ಮತದಾನದ ವೇಳೆ ಪರ್ಯಾಯ ದಾಖಲೆಗಳನ್ನಾಗಿ ಬಳಸಬಹುದು ಎಂದು ಹೇಳಲಾಗಿದೆ.
ಮತದಾರರ ಗುರುತನ್ನು ಪರಿಶೀಲಿಸುವಾಗ ಸಣ್ಣ ಕ್ಲೆರಿಕಲ್ ಅಥವಾ ಕಾಗುಣಿತ ದೋಷಗಳನ್ನು ಕಡೆಗಣಿಸುವಂತೆ ಕೇಂದ್ರ ಚುನಾವಣಾ ಆಯೋಗ ಸೂಚನೆ ನೀಡಿದೆ.
ವ್ಯಕ್ತಿಯ ಗುರುತನ್ನು ಅವರ ಮತದಾರರ ಗುರುತಿನ ಚೀಟಿಯ ಮೂಲಕ ದೃಢೀಕರಿಸಬಹುದು. ಚುನಾವಣಾ ನೋಂದಣಿ ಅಧಿಕಾರಿ ನೀಡಿದ ಮತದಾರರ ಗುರುತಿನ ಚೀಟಿ ಗುರುತಿನ ಉದ್ದೇಶಗಳಿಗಾಗಿ ಮಾನ್ಯವಾಗಿರುತ್ತದೆ, ಅವರು ಹಾಜರಾಗುವ ಮತಗಟ್ಟೆಯ ಮತದಾರರ ಪಟ್ಟಿಯಲ್ಲಿ ವ್ಯಕ್ತಿಯ ಹೆಸರು ಕಾಣಿಸಿಕೊಂಡರೆ ಅದು ಮಾನ್ಯವಾಗಿರುತ್ತದೆ ಎಂದು ಆಯೋಗ ಸ್ಪಷ್ಟಪಡಿಸಿದೆ.
ಗುರುತಿನ ಚೀಟಿಯಲ್ಲಿನ ಛಾಯಾಚಿತ್ರದಲ್ಲಿ ವ್ಯತ್ಯಾಸವಿದ್ದರೆ, ಮತದಾರರು ಇಸಿ ಸೂಚಿಸಿದ ಪರ್ಯಾಯ ಫೋಟೋ ದಾಖಲೆಗಳಲ್ಲಿ ಒಂದನ್ನು ಪ್ರಸ್ತುತಪಡಿಸಬೇಕು. ಮತದಾರರ ಐಡಿ ಕಾರ್ಡ್ ಅನ್ನು ಪ್ರಸ್ತುತಪಡಿಸಲು ಸಾಧ್ಯವಾಗದ ಮತದಾರರು ತಮ್ಮ ಗುರುತನ್ನು ಸ್ಥಾಪಿಸಲು ಪರ್ಯಾಯ ಫೋಟೋ ಗುರುತಿನ ದಾಖಲೆಗಳಲ್ಲಿ ಒಂದನ್ನು ಒದಗಿಸಬೇಕು ಎಂದು ಚುನಾವಣಾ ಆಯೋಗ ಹೇಳಿದೆ.