ಬೆಂಗಳೂರು: ಪಾಲಿಕೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ನೌಕರರು ಮತ್ತು ಅವಲಂಬಿತರಿಗೆ ಆರೋಗ್ಯ ಸೌಲಭ್ಯ ಕಲ್ಪಿಸಲು ಬಿಬಿಎಂಪಿ ಮುಂದಾಗಿದ್ದು, ಪಿಂಚಣಿದಾರರ ಆರೋಗ್ಯ ರಕ್ಷಾ ಯೋಜನೆ ಆರಂಭಿಸಲಿದೆ.
ನಿವೃತ್ತ ನೌಕರರು ಮತ್ತು ಅವರ ಕುಟುಂಬದವರಿಗೆ ಆರೋಗ್ಯ ಸೌಲಭ್ಯ ಒದಗಿಸುವಂತೆ ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಸಲ್ಲಿಸಿದ ಮನವಿಗೆ ಸಂಬಂಧಿಸಿದಂತೆ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯ ಸಭೆಯಲ್ಲಿ ಯೋಜನೆಗೆ ಅನುಮೋದನೆ ನೀಡಲಾಗಿದೆ.
ಯೋಜನೆ ಆರಂಭಿಸಲು ಬಿಬಿಎಂಪಿ ಬಜೆಟ್ ನಲ್ಲಿ ಈಗಾಗಲೇ 10 ಕೋಟಿ ರೂ. ಮೂಲ ನಿಧಿಯಾಗಿ ಮೀಸಲಿಡಲಾಗಿದ್ದು, ಇದರೊಂದಿಗೆ ಪಿಂಚಣಿದಾರರಿಂದ ಪ್ರತಿ ತಿಂಗಳು 300 ರೂ. ಕಡಿತಗೊಳಿಸಿ ಹೊಸ ಬ್ಯಾಂಕ್ ನಲ್ಲಿ ಖಾತೆ ಆರಂಭಿಸಿ ಠೇವಣಿ ಇಡಲಾಗುವುದು. ಈ ಠೇವಣಿ ಹಣದಿಂದ ಬರುವ ಬಡ್ಡಿಯಲ್ಲಿ ಆರೋಗ್ಯ ಸೌಲಭ್ಯ ನೀಡಲು ಯೋಜನೆ ರೂಪಿಸಲಾಗಿದ್ದು, ಪಿಂಚಣಿದಾರರು ಗರಿಷ್ಠ 2 ಲಕ್ಷ ರೂ.ವರೆಗೆ, ಅವಲಂಬಿತ ಸದಸ್ಯರು ಒಂದು ಲಕ್ಷದವರೆಗೆ ಸೌಲಭ್ಯ ಪಡೆದುಕೊಳ್ಳಬಹುದು.